ಈಡಿಗ ಅಭಿವೃದ್ಧಿ ನಿಗಮಕ್ಕೆ ೫೦೦ ಕೋಟಿ ಅನುದಾನ ನೀಡಲು ಆಗ್ರಹ

ನಗರದ ಅರಮನೆ ಮೈದಾನದಲ್ಲಿ ಇಂದು ನಡೆದ ಆರ್ಯ ಈಡಿಗರ ಬೃಹತ್ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಮುದಾಯದ ಸ್ವಾಮೀಜಿಗಳು, ನಟ ಶಿವರಾಜ್‌ಕುಮಾರ್, ಸಚಿವ ಮಧುಬಂಗಾರಪ್ಪ, ಅಧ್ಯಕ್ಷ ತಿಮ್ಮೇಗೌಡ ಸೇರಿದಂತೆ ಶಾಸಕರು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಬೆಂಗಳೂರು, ಡಿ. ೧೦- ಆರ್ಯ ಈಡಿಗ ಅಭಿವೃದ್ಧಿ ನಿಗಮಕ್ಕೆ ೫೦೦ ಕೋಟಿ ರೂ. ಅನುದಾನ ನೀಡುವಂತೆ ಬೆಂಗಳೂರಿನಲ್ಲಿಂದು ನಡೆದ ಆರ್ಯ ಈಡಿಗ ಸಮಾವೇಶದಲ್ಲಿ ಆಗ್ರಹಿಸಲಾಯಿತು.ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ, ಬಿಲ್ಲವ ನಾಮಧಾರಿ ಸೇರಿದಂತೆ ೨೫ ಪಂಗಡಗಳ ಬೃಹತ್ ಜಾಗೃತ ಸಮಾವೇಶದಲ್ಲಿ ಮಾತನಾಡಿದ ಆರ್ಯ ಈಡಿಗ ಸಮುದಾಯದ ಶಾಸಕರು, ಪ್ರಮುಖರು, ಆರ್ಯ ಈಡಿಗ ಅಭಿವೃದ್ಧಿ ನಿಗಮಕ್ಕೆ ೫೦೦ ಕೋಟಿ ರೂ. ಅನುದಾನ ಒದಗಿಸುವಂತೆ ಒತ್ತಾಯಿಸಿದರು.ಹಾಗೆಯೇ ಆರ್ಯ ಈಡಿಗ ಸಮಾಜಕ್ಕೆ ಮತ್ತೊಂದು ಸಚಿವ ಸ್ಥಾನ ಒತ್ತಾಯವೂ ಈ ಸಮಾವೇಶದಲ್ಲಿ ಕೇಳಿ ಬಂತು.ಈ ಸಮಾವೇಶದಲ್ಲಿ ಮಾತನಾಡಿದ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ೫೦ ಲಕ್ಷ ಜನಸಂಖ್ಯೆ ಇರುವ ಈ ಸಮಾಜಕ್ಕೆ ನಿಗಮ ಮಾಡುವ ಮೂಲಕ ೫೦೦ ಕೋಟಿ ರೂ. ಹಣ ಒದಗಿಸಬೇಕು ಎಂದು ಒತ್ತಾಯಿಸಿದರು.ಆರ್ಯ ಈಡಿಗರ ಗುರುಗಳಾದ ನಾರಾಯಣ ಗುರುಗಳ ಹೆಸರಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಪೀಠಗಳು ಸ್ಥಾಪನೆಯಾಗಬೇಕಿದೆ ಎಂದು ಅವರು ಹೇಳಿದರು.ಸಮುದಾಯಕ್ಕೆ ಮತ್ತೊಂದು ಮಂತ್ರಿ ಸ್ಥಾನ ನೀಡುವಂತೆಯೂ ಮನವಿ ಮಾಡಿದ ಅವರು, ಯಾರನ್ನಾದರೂ ಮಂತ್ರಿ ಮಾಡಿ. ಆದರೆ ನಮ್ಮ ಸಮುದಾಯಕ್ಕೆ ಸೇರಿದ ಇನ್ನೊಬ್ಬರನ್ನು ಮಂತ್ರಿ ಮಾಡಿ ಎಂದು ಆಗ್ರಹಿಸಿದರು.ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಈಡಿಗ ಸಮಾಜಕ್ಕೆ ೨ ಮಂತ್ರಿ ಸ್ಥಾನ ನೀಡಿ. ಒಂದು ವಿಧಾನಸಭೆಗೆ ಕೊಡಿ, ಮತ್ತೊಂದು ವಿಧಾನ ಪರಿಷತ್ ಸದಸ್ಯರಿಗೆ ಕೊಡಿ ಎಂದು ಹರತಾಳು ಹಾಲಪ್ಪ ಒತ್ತಾಯಿಸಿದರು.ಈ ಸಮಾವೇಶದಿಂದ ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅಂತರ ಕಾಯ್ದುಕೊಂಡಿದ್ದರು. ಸಮುದಾಯದ ಎಲ್ಲ ಪ್ರಮುಖ ಮುಖಂಡರು ಭಾಗವಹಿಸಿದ್ದರು.ಆರ್ಯ ಈಡಿಗ ಸಮಾಜದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಯೋಗೇಂದ್ರ ಅವಧೂತರು, ಅರುಣಾನಂದ ಸ್ವಾಮೀಜಿ, ಸತ್ಯಾನಂದ ತೀರ್ಥ ಸ್ವಾಮೀಜಿ ಇವರುಗಳು ಉಪಸ್ಥಿತರಿದ್ದರು.
ಸಿಎಂ ಚಾಲನೆ
ಆರ್ಯ ಈಡಿಗರ ಈ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಮಧು ಬಂಗಾರಪ್ಪ, ನಟ ಶಿವರಾಜ್‌ಕುಮಾರ್, ಶ್ರೀಮುರುಳಿ, ಚಿನ್ನೇಗೌಡ, ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ. ಎಂ. ತಿಪ್ಪೇಗೌಡ, ಶಾಸಕರುಗಳಾದ ಗೋಪಾಲಕೃಷ್ಣ ಬೇಳೂರು, ಭೀಮಣ್ಣ ನಾಯಕ, ಮಾಜಿ ಶಾಸಕ ಹರತಾಳು ಹಾಲಪ್ಪ, ಶಾಸಕ ಹೆಚ್.ಆರ್. ಗವಿಯಪ್ಪ, ಶಾಸಕ ಉಮಾನಾಥ್ ಕೋಟ್ಯನ್, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಕುಮಾರ ಬಂಗಾರಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.