ಈಜಲು ಹೋಗಿ ನೀರು ಪಾಲಾದ ಯುವಕನ ದೇಹ ಪತ್ತೆ

ಕಲಬುರಗಿ:ಜೂ.18: ಜಿಲ್ಲೆಯ ಶಹಾಬಾದ ತಾಲೂಕಿನ ಗೋಳಾ(ಕೆ) ಗ್ರಾಮದ ಕಾಗಿಣಾ ನದಿಯ ಬ್ರಿಡ್ಜ್ ಕಮ್ ಬ್ಯಾರೇಜ್ ಬಳಿ ಈಜಲು ಹೋಗಿ ನೀರು ಪಾಲಾದ ಯುವಕನ ಮೃತ ದೇಹ ರವಿವಾರ ಮಧ್ಯಾಹ್ನ ಪತ್ತೆಯಾಗಿದೆ.
ನೀರು ಪಾಲಾದ ಮೃತ ದುರ್ದೈವಿ ತೊನಸನಹಳ್ಳಿ(ಎಸ್) ಗ್ರಾಮದ ತೇಜಸ್ ಬಸವರಾಜ ಕುಂಬಾರ(22). ತೊನಸನಹಳ್ಳಿ(ಎಸ್) ಗ್ರಾಮದಿಂದ ಶನಿವಾರ ಗೆಳೆಯರೊಂದಿಗೆ ಗೋಳಾ(ಕೆ) ಗ್ರಾಮದ ಕಾಗಿಣಾ ನದಿಯ ಬ್ರಿಡ್ಜ್ ಕಮ್ ಬ್ಯಾರೇಜ್ ಬಳಿ ಈಜಲು ಹೋಗಿ ಮುಳುಗಿದ್ದಾನೆ.
ತೇಜಸ್ ಮುಳುಗುತ್ತಿರುವುದನ್ನು ಕಂಡ ಗೆಳೆಯರು ರಕ್ಷಿಸಲು ಮುಂದಾಗಿದ್ದಾರೆ ಆದರೂ ಅವನನ್ನು ಕಾಪಾಡಲು ಸಾಧ್ಯವಾಗಲಿಲ್ಲ. ತಕ್ಷಣವೇ ಗೆಳೆಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ಹಾಗೂ ಪಿಎಸ್ಐ ಅಶೋಕ ಪಾಟೀಲ ಅವರು ಅಗ್ನಿಶಾಮಕ ದಳ ಮತ್ತು ಸ್ಥಳೀಯ ಮೀನುಗಾರರ ಸಹಾಯ ಪಡೆದು ಮೃತ ದೇಹದ ಶೋಧ ಕಾರ್ಯ ತಡರಾತ್ರಿಯವರೆಗೂ ನಡೆಸಿದರೂ ಶನಿವಾರ ದೇಹ ಪತ್ತೆಯಾಗಲಿಲ್ಲ.
ಮತ್ತೆ ರವಿವಾರ ಎನ್ಡಿಆರ್ಎಫ್,ಅಗ್ನಿಶಾಮಕ ದಳ, ಮೀನುಗಾರರ ತಂಡ ನದಿಯಲ್ಲಿ ಹುಡುಕಾಟ ನಡೆಸಿ ಮಧ್ಯಾಹ್ನ ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.