
ಕಲಬುರಗಿ,ಏ.29: ಈಜಲು ತೆರಳಿದ ಗೆಳೆಯರಿಬ್ಬರು ಕಾಗಿಣಾ ನದಿ ಪಾಲಾದ ಘಟನೆ ಸೇಡಂ ತಾಲ್ಲೂಕಿನ ಬೀರನಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ನದಿಯ ಸೆಳೆತಕ್ಕೆ ಕಾಶೀನಾಥ್ ತಂದೆ ಭೀಮರಾಯ್ (16) ಮತ್ತು ಭೀಮಾಶಂಕರ್ ಬಾಬು (15) ಅವರು ಕೊಚ್ಚಿಕೊಂಡು ಹೋಗಿದ್ದು, ಒಬ್ಬಾತ ನದಿಯಲ್ಲಿಯೇ ಮೃತಪಟ್ಟರೆ, ಇನ್ನೋರ್ವ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಭೀಮಾಶಂಕರ್ ಬಾಬು ಅಸುನೀಗಿದ್ದಾನೆ.
ಕಳೆದ ಶುಕ್ರವಾರ ಇಬ್ಬರು ಗೆಳೆಯರು ಗ್ರಾಮದ ಕಾಗಿಣಾ ನದಿಯಲ್ಲಿ ಈಜಲು ಹೋಗಿದ್ದರು. ನದಿಯ ನೀರಿನ ಸೆಳೆತಕ್ಕೆ ಇಬ್ಬರೂ ಕೊಚ್ಚಿಕೊಂಡು ಹೋದರು. ಸುದ್ದಿ ತಿಳಿಯುತ್ತಿದ್ದಂತೆಯೇ ಎಸ್‍ಡಿಆರ್‍ಎಫ್ ತಂಡವು ಬೆಳಿಗ್ಗೆ 8 ಗಂಟೆಗೆ ಆಗಮಿಸಿ ಇಬ್ಬರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿತು. ಮೊದಲಿಗೆ ಕಾಶಿನಾಥ್ ತಂದೆ ಭೀಮರಾಯ್‍ನ ಶವ ಪತ್ತೆಯಾಯಿತು. ಶವವನ್ನು ಹರಸಾಹಸ ಪಟ್ಟು ಹೊರತೆಗೆದರು.
ನಂತರ ಭೀಮಾಶಂಕರ್ ಬಾಬು ಪತ್ತೆಯಾಗಿದ್ದು, ಆತನಿಗೆ ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತನೂ ಅಸುನೀಗಿದ. ಈ ಸಂದರ್ಭದಲ್ಲಿ ಮೃತ ಕಾಶೀನಾಥ್ ತಂದೆ ಭೀಮರಾಯ್‍ನ ಮಾವ ಬೀರನಳ್ಳಿ ಗ್ರಾಮದ ನಿವಾಸಿ ರಾಜು ಅವರು ಮಾತನಾಡಿ, ಆತ ತಂದೆ, ತಾಯಿ ಕಳೆದುಕೊಂಡು ಚಿಕ್ಕ ವಯಸ್ಸಿನಲ್ಲಿ ನಮ್ಮ ಮನೆಯಲ್ಲಿ ಇದ್ದ. ಆತನಿಗೆ ಈಜಲು ಬರುತ್ತಿರಲಿಲ್ಲ. ಆಕಸ್ಮಿಕವಾಗಿ ಇಬ್ಬರು ಗೆಳೆಯರು ಕೂಡಿಕೊಂಡು ಕಾಗಿಣಾ ನದಿಯಲ್ಲಿ ಈಜಲು ಹೋಗಿದ್ದ. ಇಬ್ಬರು ಅಕ್ಕಂದಿರು ಇದ್ದು, ಒಬ್ಬ ಅಕ್ಕನ ಮದುವೆ ಆಗಿದೆ. ಒಬ್ಬ ಅಣ್ಣ ಇದ್ದಾನೆ. ಕೂಲಿ ಕೆಲಸ ಮಾಡುತ್ತಿದ್ದಾನೆ ಎಂದರು.
ಚಿಂಚೋಳಿ ಡಿವೈಎಸ್‍ಪಿ ರುದ್ರಪ್ಪ ಉಜಾಲ್ ಕುಪ್ಪೆ, ಸಿಪಿಐ ಸಂದೀಪ್‍ಸಿಂಗ್ ಹಾಗೂ ಮಳಖೇಡ್ ಪಿಎಸ್‍ಐ ಹಣಮಂತ್ ಸಿದ್ದಾಪುರ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಚುರುಕಿನ ಕಾರ್ಯಾಚರಣೆ ಮಾಡಿದರು ಎನ್ನಲಾಗಿದೆ. ಈ ಕುರಿತು ಮಳಖೇಡ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.