ಈಕ್ವೆಡಾರ್‌ನಲ್ಲಿ ಪ್ರಬಲ ಭೂಕಂಪ: ಕನಿಷ್ಠ 14 ಮಂದಿ ಸಾವು

ಈಕ್ವೆಡಾರ್, ಮಾ.೧೯- ಈಕ್ವೆಡಾರ್‌ನ ದಕ್ಷಿಣ ಕರಾವಳಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ ೧೪ ಮಂದಿ ಮೃತಪಟ್ಟ ಘಟನೆ ನಡೆದಿದೆ. ೬.೭ ತೀವ್ರತೆಯ ಭೂಕಂಪದಲ್ಲಿ ಹಲವು ನಗರಗಳ ಕಟ್ಟಡಗಳು ಧ್ವಂಸಗೊಂಡಿದ್ದು, ಭಾರೀ ನಷ್ಟ ಸಂಭವಿಸಿದೆ. ದುರ್ಘಟನೆಯಲ್ಲಿ ಮೃತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.
ಇಲ್ಲಿನ ಎಲ್‌ಒರೊದ ದಕ್ಷಿಣ ಪ್ರಾಂತ್ಯದ ಭೂಕಂಪದಿಂದಾಗಿ ಹೆಚ್ಚಿನ ಹಾನಿ ಸಂಭವಿಸಿದ್ದು, ಕಟ್ಟಡಗಳಡಿಯಲ್ಲಿ ಜನರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಎಲ್ ಒರೊದಲ್ಲಿ ಹನ್ನೊಂದು ಸಾವುಗಳು ಮತ್ತು ಅಜುವಾಯ್ ಪ್ರಾಂತ್ಯದಲ್ಲಿ ಒಂದು ಸಾವಿನ ಪ್ರಕರಣ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೂ ಅಲ್ಲದೆ ಮಚಲಾ ಮತ್ತು ಕ್ಯುಯೆಂಕಾ ನಗರಗಳಿಗೆ ಕೂಡ ಹಾನಿ ಉಂಟಾಗಿದೆ. ಈಕ್ವೆಡಾರ್‌ನ ಎರಡನೇ ಅತಿದೊಡ್ಡ ನಗರವಾದ ಗುವಾಕ್ವಿಲ್‌ನಿಂದ ಸುಮಾರು ೮೦ ಕಿಮೀ ದೂರದಲ್ಲಿರುವ ಬಾಲಾವೊ ಬಳಿ ಭೂಕಂಪನದ ಕೇಂದ್ರ ಬಿಂದುವಿದ್ದು, ಇಲ್ಲಿ ಸುಮಾರು ೩೦ ಲಕ್ಷ ಜನರು ವಾಸಿಸುತ್ತಿದ್ದಾರೆ. ಮನಾಬಿ, ಮಾಂತಾ ಮತ್ತು ರಾಜಧಾನಿ ಕ್ವಿಟೊ ಸೇರಿದಂತೆ ಹಲವಾರು ಇತರ ನಗರಗಳಲ್ಲಿ ಕೂಡ ಭೂಕಂಪನದ ಅನುಭವಗಳಾಗಿದೆ. ಅದೂ ಅಲ್ಲದೆ ಪೆರುವಿನಲ್ಲಿ ಕೂಡ ಭೂಕಂಪನದ ಅನುಭವಗಳಾಗಿದ್ದು, ಆದರೆ ಸಾವು-ನೋವಿನ ಬಗ್ಗೆ ಯಾವುದೇ ವರದಿಗಳಾಗಿಲ್ಲ. ಇನ್ನು ಭೂಕಂಪ ಸುಮಾರು ೬೬ ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ ೬.೮ರಷ್ಟಿತ್ತು ಎಂದು ಅಮೆರಿಕದ ಜಿಯಲಾಜಿಯಲ್ ಸರ್ವೆ ಹೇಳಿದೆ. ಗುವಾಯಸ್ ಪ್ರದೇಶದಲ್ಲಿ ಹಲವು ಕಟ್ಟಡಗಳಿಗೆ ಭೂಕಂಪದಿಂದಾಗಿ ಹಾನಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕ್ಯೂಯೆಂಕಾ ನಗರದಲ್ಲಿ ಕಾರಿನ ಮೇಲೆ ಕಟ್ಟಡವೊಂದು ಕುಸಿದು ಬಿದ್ದು ಒಬ್ಬ ಮೃತಪಟ್ಟಿದ್ದಾನೆ. ಸಾಂಟಾ ರೋಸಾ ಪ್ರದೇಶದಲ್ಲಿ ಇತರ ಮೂವರು ಮೃತಪಟ್ಟಿದ್ದಾರೆ. ಇತರ ಹಲವರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಸರ್ಕಾರ ವಿವರಿಸಿದೆ. ರಾಜಧಾನಿ ಕ್ಯೂಟೊಗೆ ತೈಲ ಸರಬರಾಜು ಮಾಡುವ ಎಸ್ಮೆರಲ್ಡಾಸ್ ಪೈಪ್‌ಲೈನ್ ಅನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದ್ದು, ಇದೀಗ ಮತ್ತೆ ಕಾರ್ಯಾಚರಣೆ ಆರಂಭಿಸಿದೆ. ಕೋಸ್ಟಲ್ ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ಪ್ಲಾಂಟ್ ಮತ್ತು ಇತರ ಎರಡು ಟರ್ಮಿನಲ್‌ಗಳಿಂದ ಉದ್ಯೋಗಿಗಳನ್ನು ಸ್ಥಳಾಂತರಿಸಲಾಗಿದೆ. ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಚಾಲಾ ಪಟ್ಟಣದಲ್ಲಿ ಹಲವು ಕಟ್ಟಡಗಳು ಧ್ವಂಸವಾಗಿರುವುದು ಸಾಮಾಜಿಕ ಜಾಲತಾಣ ಪೋಸ್ಟಿಂಗ್‌ನಿಂದ ತಿಳಿದು ಬರುತ್ತಿದೆ. ಕ್ಯೂಯೆನ್ಸಾ ನಗರದಲ್ಲಿ ಕೂಡಾ ಕಟ್ಟಡಗಳಿಗೆ ಹಾನಿಯಾಗಿದೆ. ಹಲವಾರು ರಸ್ತೆಗಳು ಭೂಕುಸಿತದ ಪರಿಣಾಮ ಮುಚ್ಚಲ್ಪಟ್ಟಿದೆ. ಹಲವಾರು ಮನೆಗಳು, ಶೈಕ್ಷಣಿಕ ಕಟ್ಟಡಗಳು ಮತ್ತು ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ಯುಂಕಾ ನಗರದಲ್ಲಿ ಗೋಡೆಯೊಂದು ಅವರ ಕಾರಿನ ಮೇಲೆ ಕುಸಿದು ಬಿದ್ದ ನಂತರ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ, ಆದರೆ ಜಾಂಬೆಲಿ ದ್ವೀಪದಲ್ಲಿ ಭದ್ರತಾ ಕ್ಯಾಮೆರಾ ಟವರ್ ಕುಸಿದು ಮೂರು ಜನರು ಸಾವನ್ನಪ್ಪಿದ್ದಾರೆ. ೨೦೧೬ರ ಬಳಿಕ ಸದ್ಯ ಈಕ್ವೆಡಾರ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಇದಾಗಿದೆ. ಆ ವೇಳೆ ಸುಮಾರು ೭೦೦ ಜನರು ಸಾವನ್ನಪ್ಪಿದರು ಮತ್ತು ಸಾವಿರಾರು ಜನರು ಗಾಯಗೊಂಡಿದ್ದರು.