ಇ.ವಿ.ಎಂ.,ವಿ.ವಿ.ಪ್ಯಾಟ್ ಮತಯಂತ್ರಗಳ ಅಂತಿಮ ಸಿದ್ಧತೆ ಕಾರ್ಯ ಭರದಿಂದ‌ ಸಾಗಿದೆ:ಬಿ.ಫೌಜಿಯಾ ತರನ್ನುಮ್

ಕಲಬುರಗಿ:ಏ.27: ಮೇ 7 ರಂದು ನಡೆಯಲಿರುವ 05-ಗುಲಬರ್ಗಾ (ಪ.ಜಾ.) ಲೋಕಸಭಾ ಕ್ಷೇತ್ರದ ಮತದಾನಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಇಂದು ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳ ಸಮಕ್ಷಮದಲ್ಲಿ ಮತಯಂತ್ರಗಳಲ್ಲಿ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು, ಚಿನ್ಹೆ ಜೋಡಿಸಿ ಇ.ವಿ.ಎಂ, ವಿ.ವಿ.ಪ್ಯಾಟ್ ಕಾರ್ಯಾರಂಭ ಮತ್ತು ಅಂತಿಮ ಸಿದ್ಧತೆ ಪರಿಶೀಲಿಸಲಾಯಿತು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯ ಸಾಮಾನ್ಯ ವೀಕ್ಷಕರಾದ ದೀಪನ್‍ಕರ್ ಸಿನ್ಹಾ ಮಾರ್ಗದರ್ಶನದಲ್ಲಿ ಈ ಕಾರ್ಯ ನಡೆದಿದೆ. ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಸಮಕ್ಷಮದಲ್ಲಿ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂ ಸ್ಥಳದಲ್ಲಿ ಕ್ಷೇತ್ರಕ್ಕೆ ಹಂಚಿಕೆಯಾದ ಎಲ್ಲಾ ಇ.ವಿ.ಎಂ.ಗಳಲ್ಲಿ (ಮೀಸಲು ಮತಯಂತ್ರಗಳು ಸೇರಿ) ಬ್ಯಾಲೆಟ್ ಪೇಪರ್‌ ಪ್ರಕಾರ ಹೆಸರು ಜೋಡಿಸಿ ಕಮೀಷನಿಂಗ್ ಕಾರ್ಯ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಗುಲಬರ್ಗಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗುರುಮಠಕಲ್ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ 2,166 ಮತಗಟ್ಟೆ ಸ್ಥಾಪಿಸಲಾಗಿದೆ. ಅದೇ ರೀತಿ ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಜಿಲ್ಲೆಯ ಆಳಂದ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೂ ಅಲ್ಲಿನ ಅಭ್ಯರ್ಥಿಗಳ ಪಟ್ಟಿಯನ್ನು ಸೇರಿಸುವ ಕಾರ್ಯಕೂಡ ನಡೆದಿದೆ ಎಂದು ತಿಳಿಸಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ಮತಗಟ್ಟೆಗಳು:

34-ಅಫಜಲಪೂರ 251 ಮತಗಟ್ಟೆಗಳು, 35-ಜೇವರ್ಗಿ 279, 40-ಚಿತ್ತಾಪೂರ -256, 41-ಸೇಡಂ-261, 43-ಗುಲಬರ್ಗಾ ಗ್ರಾಮೀಣ-290, 44-ಗುಲಬರ್ಗಾ ದಕ್ಷಿಣ-261, 45-ಗುಲಬರ್ಗಾ ಉತ್ತರ-284 ಹಾಗೂ 39-ಗುರುಮಿಠಕಲ್ 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಧಾನಸಭಾವಾರು ಸ್ಟ್ರಾಂಗ್ ರೂಮ್‍ಗಳ ವಿವರ:

34-ಅಫಜಲಪುರ ವಿಧಾನಸಭಾ ಕ್ಷೇತ್ರದ ಸ್ಟ್ರಾಂಗ್ ರೂಮ್-ಅಫಜಲಪುರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, 35-ಜೇವರ್ಗಿ ವಿಧಾನಸಭಾ ಕ್ಷೇತ್ರ-ಜೇವರ್ಗಿ ಸರ್ಕಾರಿ ಡಿಗ್ರಿ ಕಾಲೇಜು, 39-ಗುರುಮಿಠಕಲ್ ವಿಧಾನಸಭಾ ಮತಕ್ಷೇತ್ರ-ಗುರುಮಿಠಕಲ್ ಪ್ರಥಮ ದರ್ಜೆ ಕಾಲೇಜು, 40-ಚಿತ್ತಾಪುರ ವಿಧಾನಸಭಾ ಮತಕ್ಷೇತ್ರ-ಚಿತ್ತಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 41-ಸೇಡಂ ವಿಧಾನಸಭಾ ಮತಕ್ಷೇತ್ರ-ಸೇಡಂ ನೃಪತುಂಗ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು, 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಮತಕ್ಷೇತ್ರ-ಕಲಬುರಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಟ್ರಾಂಗ್ ರೂಮ್‍ಗಳನ್ನು ಸ್ಥಾಪಿಸಲಾಗಿದೆ.

44-ಗುಲಬರ್ಗಾ ದಕ್ಷಿಣ ವಿಧಾನಸಭಾ ಮತಕ್ಷೇತ್ರ-ಕಲಬುರಗಿ ಎನ್.ವಿ. ಗ್ರೌಂಡ್ ಸಮೀಪದ ಎ.ಸಿ.ಟಿ. ಇಂಟರ್ ನ್ಯಾಷನಲ್ ಸ್ಕೂಲ್, 45-ಗುಲಬರ್ಗಾ ಉತ್ತರ ವಿಧಾನಸಭಾ ಮತಕ್ಷೇತ್ರ-ಕಲಬುರಗಿಯ ಶರಣನಗರದ ಅಪ್ಪಾ ಕಿಡ್ಸ್ ವರ್ಲ್ಡ್ ಸ್ಕೂಲ್ ಮತ್ತು ದೊಡ್ಡಪ್ಪ ಅಪ್ಪಾ ಬ್ಲಾಕ್ ನಲ್ಲಿ ಸ್ಟ್ರಾಂಗ್ ರೂಮ್‍ಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.