ಇ.ಡಿ. ಸೋನಿಯಾ ವಿಚಾರಣೆ ಲೋಕಸಭೆಯಲ್ಲಿ ಮಾರ್ದನಿ

ನವದೆಹಲಿ,ಜು.೨೧- ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿನಿರ್ದೇಶನಾಲಯ ಅಧಿಕಾರಿಗಳು ಸೋನಿಯಾಗಾಂಧಿ ಅವರನ್ನು ವಿಚಾರಣೆಗೆ ಗುರಿಪಡಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವ ವರ್ತನೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಾಂಗ್ರೆಸ್ ವಿರುದ್ಧ ಪ್ರಲ್ಹಾದ್‌ಜೋಷಿ ಲೋಕಸಭೆಯಲ್ಲಿಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಡಿ ಅಧಿಕಾರಿಗಳು ಸೋನಿಯಾ ಅವರನ್ನು ವಿಚಾರಣೆಗೆ ಗುರಿಪಡಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಲೋಕಸಭೆಯಲ್ಲಿ ಬಾವಿಗಿಳಿದು ಕೇಂದ್ರಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಪ್ರಲ್ಹಾದ್‌ಜೋಷಿ, ಸೋನಿಯಾಗಾಂಧಿ ಅವರು ಸೂಪರ್ ಹ್ಯೂಮನ್‌ಬಿಯಿಂಗಾ? ಕಾನೂನಿಗಿಂತ ದೊಡ್ಡವರಾ? ಕಾನೂನಿಗೂ ಅವರಿಗೂ ಸಂಬಂಧವೇ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ನಿನ್ನೆ ಲೋಕಸಭೆಯಲ್ಲಿ ಬೆಲೆ ಏರಿಕೆ ಕುರಿತು ಚರ್ಚೆಗೆ ಒತ್ತಾಯಿಸಿದ್ದರು. ಇಂದು ಸೋನಿಯಾಗಾಂಧಿ ಅವರನ್ನು ವಿಚಾರಣೆಗೆ ಗುರಿಪಡಿಸುವುದನ್ನು ವಿರೋಧಿಸಿ ಧರಣಿ ನಡೆಸುತ್ತಿದ್ದಾರೆ. ಎರಡೂ ಸದನಗಳಲ್ಲಿ ಸಭಾಧ್ಯಕ್ಷರು ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಪ್ರತಿಪಕ್ಷಗಳು ಸುಗಮ ಕಲಾಪಕ್ಕೆ ಸಹಕರಿಸುತ್ತಿಲ್ಲ. ಅವರಿಗೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದರೆ ಚರ್ಚೆಯಲ್ಲಿ ಭಾಗವಹಿಸಲಿ ಎಂದು ತಿರುಗೇಟು ನೀಡಿದರು.