ಇ.ಡಿ. ವಿಶೇಷ ಕೋರ್ಟ್ ಮುಂದೆ ನಾಳೆ ಡಿಕೆಶಿ ಹಾಜರು

ಬೆಂಗಳೂರು,ಜು.೨೯- ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ದೆಹಲಿಗೆ ತೆರಳಿದರು.ಇಡಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ಸಲ್ಲಿಸಿದ್ದು ಕಳೆದ ಜು. ೧ ರಂದು ಡಿ.ಕೆ .ಶಿವಕುಮಾರ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.ಈ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಇಡಿ ವಕೀಲರು ಕಾಲಾವಕಾಶ ಕೋರಿದ್ದರಿಂದ ನ್ಯಾಯಾಲಯ ವಿಚಾರಣೆಯನ್ನು ಜು. ೩೦ಕ್ಕೆ ಮುಂದೂಡಿತ್ತು. ನಾಳೆ ನ್ಯಾಯಾಲಯದಲ್ಲಿ ಡಿ.ಕೆ ಶಿವಕುಮಾರ್ ಹಾಜರಾಗಲಿದ್ದು, ಜಾಮೀನು ಅರ್ಜಿಯು ವಿಚಾರಣೆಗೆ ಬರಲಿದೆ.
ನಾಳಿನ ಇಡಿ ನ್ಯಾಯಾಲಯಕ್ಕೆ ಹಾಜರಾಗಲು ಡಿ.ಕೆ ಶಿವಕುಮಾರ್ ಇಂದು ದೆಹಲಿಗೆ ತೆರಳಿದ್ದಾರೆ. ಇಂದು ಮತ್ತು ನಾಳೆ ದೆಹಲಿಯಲ್ಲೇ ಉಳಿಯಲಿರುವ ಶಿವಕುಮಾರ್, ಭಾನುವಾರ ನಗರಕ್ಕೆ ವಾಪಸ್ಸಾಗುವರು.
ಹೈಕಮಾಂಡ್ ಭೇಟಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಮ್ಮ ದೆಹಲಿ ಭೇಟಿ ಸಂದರ್ಭದಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗಲಿದ್ದು, ಕೆಪಿಸಿಸಿಗೆ ಮತ್ತಷ್ಟು ಪದಾಧಿಕಾರಿಗಳ ನೇಮಕ ಸಂಬಂಧ ಚರ್ಚೆ ನಡೆಸುವರು.ಕೆಪಿಸಿಸಿಗೆ ಈಗಿರುವ ಪದಾಧಿಕಾರಿಗಳ ಜತೆಗೆ ಹೆಚ್ಚುವರಿಯಾಗಿ ಉಪಾಧ್ಯಕ್ಷರು. ಪ್ರಧಾನ ಕಾರ್ಯದರ್ಶಿಗಳು ಹಾಗೂ ಪ್ರಚಾರ ಸಮಿತಿ ಸೇರಿದಂತೆ ವಿವಿಧ ಸಮಿತಿಗಳಿಗೆ ಸದಸ್ಯರ ನೇಮಕ ಸಂಬಂಧ ವರಿಷ್ಠರೊಡನೆ ಚರ್ಚೆ ನಡೆಸುವರು.