ಇ‌.ಎಸ್.ಐ.ಸಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸ್ಟೋರೇಜ್ ಪ್ಲಾಂಟ್ ಸ್ಥಾಪನೆಗೆ ಕ್ರಮ ಕೈಗೊಳ್ಳಲು ಸೂಚನೆ

ಕಲಬುರಗಿ.ಏ.23: ಕಲಬುರಗಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುವುದರೊಂದಿಗೆ ಆಕ್ಸಿಜನ್ ಕೊರತೆಯಾಗುತ್ತಿದ್ದು, ಇದನ್ನು ನಿವಾರಿಸಲು ಇ.ಎಸ್.ಐ.ಸಿ. ಆಸ್ಪತ್ರೆಯಲ್ಲಿ ಆಕ್ಸಿಜನ್ ಸ್ಟೋರೇಜ್ ಪ್ಲ್ಯಾಂಟ್ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಸಂಸದ ಡಾ.ಉಮೇಶ ಜಾಧವ್ ಅವರು ಇ.ಎಸ್.ಐ.ಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶುಕ್ರವಾರ ಸಂಜೆ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ಜಿಮ್ಸ್ ಮತ್ತು ಇ.ಎಸ್.ಐ.ಸಿ. ಆಸ್ಪತ್ರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಮೇ ಮಾಹೆಯಲ್ಲಿ ಕೂರೋನಾ ಸೋಂಕು ಮತ್ತಷ್ಟು ಉಲ್ಬಣವಾಗುವ ಸಾಧ್ಯತೆವಿದೆ. ಹೀಗಾಗಿ ಇಲ್ಲಿ ತುರ್ತು ಪ್ಲ್ಯಾಂಟ್ ಸ್ಥಾಪಿಸಿ. ಅವಶ್ಯ ಬಿದ್ದರೆ ಕೇಂದ್ರದ ಸಂಬಂಧಿಸಿದ ಸಚಿವರನ್ನು ಭೇಟಿಯಾಗಿ ಚರ್ಚಿಸಲಾಗುವುದು. ಇ.ಎಸ್.ಐ.ಸಿ ಮತ್ತು ಡ್ರಗ್ಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಿ ಮತ್ತು ಇದಕ್ಕೆ ತಾವು ಸಮನ್ವಯಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಎಂದು ಜೆಸ್ಕಾಂ ಎಂ.ಡಿ.ರಾಹುಲ್ ಪಾಂಡ್ವೆ ಅವರಿಗೆ ಜವಾಬ್ದಾರಿ ನೀಡಿದರು.

ಇದಲ್ಲದೆ ನಗರದಲ್ಲಿ ಕಾಳಸಂತೆಯಲ್ಲಿ ರೆಮಡಿಸ್ವಿರ್ ಇಂಜೆಕ್ಷನ್ ಮಾರಾಟ ಕಂಡುಬರುತ್ತಿದ್ದು, ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕು ಮತ್ತು ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಆಕ್ಸಿಜನ್ ಮತ್ತು ರೆಮಡಿಸ್ವಿರ್ ಜಿಲ್ಲೆಯಲ್ಲಿ ಕೊರತೆಯಾಗದಂತೆ ಡ್ರಗ್ಸ್ ಅಧಿಕಾರಿಗಳು‌ ನಿಗಾ ವಹಿಸಬೇಕು ಎಂದರು.

ಆರೋಗ್ಯ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿಗೆ ಸರ್ಕಾರ ನಿರ್ದೇಶನ ನೀಡಿರುವುದರಿಂದ ಅದಷ್ಟು ಬೇಗ ನೇಮಕಾತಿ ಮಾಡಿಕೊಂಡು ಮಾನವ ಸಂಪನ್ಮೂಲ ಹೆಚ್ಚಿಸಿಕೊಳ್ಳಬೇಕು. ತಾಲೂಕ ಆಸ್ಪತ್ರೆಯಲ್ಲಿಯೂ ಸಹ ಆಕ್ಸಿಜನ್ ದೊಂದಿಗೆ ರೋಗಿಗಳ ಚಿಕಿತ್ಸೆ ನೀಡಲು ಎಲ್ಲಾ ಪೂರ್ವಸಿದ್ಧತೆ ಕೈಗೊಳ್ಳಬೇಕು ಎಂದು ಡಿ.ಹೆಚ್.ಓ. ಡಾ.ಶರಣಬಸಪ್ಪ ಗಣಜಲಖೇಡ್ ಅವರಿಗೆ ಸೂಚಿಸಿದರು.

ಕೋವಿಡ್ ಲಸಿಕೆ ಪಡೆದುಕೊಂಡವರಲ್ಲಿ ಇತ್ತೀಚಿನ ಅಧ್ಯಯನದ ಪ್ರಕಾರ ನಿರ್ಲಕ್ಷಿಸಬಹುದಾದ ಶೇ.0.033 ಪ್ರಮಾಣದಲ್ಲಿ ಸೋಂಕು ಕಂಡುಬಂದಿದೆ. ಹೀಗಾಗಿ ಲಸಿಕೆ ನೀಡಿಕೆ ಕಾರ್ಯ ಚುರುಕುಗೊಳಿಸಿ. ಆಶಾ ಕಾರ್ಯಕರ್ತೆಯರನ್ನು ಇಲ್ಲಿ ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ ಸೋಂಕಿತರ ಪೈಕಿ ಶೇ. 80ರಷ್ಟು ರೋಗಿಗಳಿಗೆ ಆಸ್ಪತ್ರೆ ಚಿಕಿತ್ಸೆ ಅಗತ್ಯವಿಲ್ಲ. ಹೋಂ ಐಸೋಲೇಟ್ ನಲ್ಲಿದ್ದರೆ ಸಾಕು. ಈ ಬಗ್ಗೆ ಸೋಂಕಿತರಿಗೆ ಮನದಟ್ಟಾಗುವಂತೆ ತಿಳಿಸುವ ಕಾರ್ಯ ಎಲ್ಲಾ ಆಸ್ಪತ್ರೆಗಳಿಂದ ಆಗಬೇಕು ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ‌ ಮೊದಲು ಕಲಬುರಗಿಯಲ್ಲಿ ಆಕ್ಸಿಜನ್ ಮತ್ತು ರೆಮಡಿಸ್ವಿರ್ ಇಂಜೆಕ್ಷನ್ ಕೊರತೆ ನೀಗಿಸಲು ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಎಂದರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ ಜಿಮ್ಸ್ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಎಸ್.ಎನ್.ಸಿ.ಯು ಕಟ್ಟಡದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ‌ ನೀಡಲು ಚಿಂತಿಸಿದ್ದು, ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದಲ್ಲದೆ ಟ್ರಾಮಾ ಸೆಂಟರ್ ನಲ್ಲಿಯೂ ಐ.ಸಿ.ಯೂ. ಬೆಡ್ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ. ಎಲ್ಲವು ಅಂದುಕೊಂಡಂತೆ ಆದಲ್ಲಿ ಮುಂದಿನ‌ ವಾರದಲ್ಲಿ‌ 100 ಐ‌.ಸಿ.ಯೂ. ಬೆಡ್ ಹೆಚ್ಚಳಗೊಂಡು ರೋಗಿಗಳ ಸೇವೆಗೆ ಸಿದ್ಧವಾಗಲಿವೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಡ್ರಗ್ಸ್ ಅಧಿಕಾರಿಗಳು ಜಿಲ್ಲೆಯಲ್ಲಿ ಆಕ್ಸಿಜನ್ ಮತ್ತು ರೆಮಡಿಸ್ವಿರ್ ಇಂಜೆಕ್ಷನ್ ಬೇಡಿಕೆ ಹಾಗೂ ಪೂರೈಕೆಯ ಬಗ್ಗೆ ಮಾಹಿತಿ ನೀಡುತ್ತ ಕಲಬುರಗಿ ಜಿಲ್ಲೆಗೆ ನಾಳೆಗೆ 1200 ವಯಲ್ಸ್ ರೆಮಡಿಸ್ವಿರ್ ಇಂಜೆಕ್ಷನ್ ಬರಲಿವೆ ಎಂದರು.

ಸಭೆಯಲ್ಲಿ ಶಾಸಕರಾದ ಎಂ.ವೈ. ಪಾಟೀಲ್, ಖನೀಜ್ ಫಾತಿಮಾ, ವಿಧಾನ ಪರಿಷತ್ತಿನ ಶಾಸಕ ಬಿ.ಜಿ. ಪಾಟೀಲ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ದಿಲೀಷ್ ಶಶಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಜಿಮ್ಸ್ ನಿರ್ದೇಶಕ ಡಾ.ಕವಿತಾ ಪಾಟೀಲ, ಇ.ಎಸ್.ಐ.ಸಿ. ಡೀನ್ ಡಾ.ಲೋಬೋ, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ ಸೇರಿದಂತೆ ಇನ್ನಿತರ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.