ಇಸ್ರೋ ಸಾಧನೆ ಐತಿಹಾಸಿಕ:ಸಿಎಂ ಬಣ್ಣನೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೨೪:ಚಂದ್ರನ ಮೇಲೆ ವಿಕ್ರಂ ಲ್ಯಾಂಡಿಂಗ್ ಮಾಡಿರುವ ಇಸ್ರೋ ವಿಜ್ಞಾನಿಗಳ ಸಾಧನೆ ಐತಿಹಾಸಿಕವಾಗಿದ್ದು, ಈ ಅಭೂತಪೂರ್ವ ಸಾಧನೆ ಇಡೀ ಜಗತ್ತೇ ಭಾರತದ ಕಡೆ ನೋಡುವಂತೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.ನಿನ್ನೆಯಷ್ಟೇ ಬಾಹ್ಯಾಕಾಶ ಕ್ಷೇತದಲ್ಲಿ ಚಾರಿತ್ರಿಕ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ಈ ಅಭೂತಪೂರ್ವ ಯಶಸ್ವಿಗೆ ಕಾರಣೀಭೂತರಾದ ಇಸ್ರೋ ಅಧ್ಯಕ್ಷ ಸೋಮನಾಥ್ ಮತ್ತವರ ತಂಡಕ್ಕೆ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಷ್ಯಾ, ಅಮೆರಿಕ, ಚೀನಾ ದೇಶಗಳ ನಂತರ ಭಾರತ ಚಂದ್ರನ ಮೇಲೆ ವಿಕ್ರಂನನ್ನು ಸುರಕ್ಷಿತವಾಗಿ ಇಳಿಸಿದೆ. ಅಲ್ಲದೆ ದಕ್ಷಿಣ ಧ್ರುವದ ಮೇಲೆ ಇಳಿಸುವ ಮೂಲಕ ಭಾರತ ವಿಶ್ವದ ಏಕೈಕ ರಾಷ್ಟ್ರವಾಗಿ ಹೊರ ಹೊಮ್ಮುವಂತೆ ಮಾಡಿರುವ ಇಸ್ರೋ ಸಾಧನೆ ಮೆಚ್ಚುವಂತದ್ದು, ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಚಂದ್ರಯಾನ-೩ನ್ನು ೩,೮೪೦೦೦ ದೂರಕ್ಕೆ ಕ್ರಮಿಸುವಂತಹ ಸಾಧನೆ ಸುಲಭದ ಮಾತಲ್ಲ, ಇದಕ್ಕಾಗಿ ಇಸ್ರೋ ಅನೇಕ ವರ್ಷಗಳಿಂದ ಪ್ರಯತ್ನ ನಡೆಸಿತ್ತು. ಈಗ ಅದು ಸಾಕಾರಗೊಂಡಿದೆ. ದೇಶಾದ್ಯಂತ ೧ ಸಾವಿರ ವಿಜ್ಞಾನಿಗಳು ಹಾಗೂ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ೫೦೦ ವಿಜ್ಞಾನಿಗಳು ಇದಕ್ಕಾಗಿ ಶ್ರಮಿಸಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು.
ಸಿಬ್ಬಂದಿಗೆ ಗೌರವ ಸಲ್ಲಿಕೆ
ಈ ಅಭೂತಪೂರ್ವ ಸಾಧನೆ ಮಾಡಿರುವ ಇಸ್ರೋ ಅಧ್ಯಕ್ಷ ಸೋಮನಾಥ್ ನೇತೃತ್ವದ ತಂಡವನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅದ್ಧೂರಿ ಸಮಾರಂಭ
ಏರ್ಪಡಿಸಿ ಈ ಚಾರಿತ್ರಿಕ ಸಾಧನೆ ಮಾಡಿದ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವ ಸಲ್ಲಿಸಲಾಗುವುದು ಎಂದರು.