ಇಸ್ರೋ ಬದ್ದತೆಯಿಂದ ಕೆಲಸ ನಿರ್ವಹಿಸುತ್ತಿದೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.03: 2040ರ ವೇಳೆಗೆ ಭಾರತೀಯರು ಚಂದ್ರನ ಮೇಲೆ ಕಾಲಿಡಬೇಕು ಎಂಬ ಮೋದಿಯವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಇಸ್ರೋ ಬದ್ದತೆಯಿಂದ ಕೆಲಸ ನಿರ್ವಹಿಸುತ್ತಿದೆ ಎಂದು ಇಸ್ರೋ ಸಂಚಾಲಕ ಶ್ರೀನಿವಾಸ್ ತಿಳಿಸಿದರು. ಅವರು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಇಸ್ರೋ ಸಾಧನೆಗಳನ್ನೊಳಗೊಂಡ ಸಂಚಾರಿ ಪ್ರದರ್ಶನ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಸ್ರೋ ಕಳೆದ ಹಲವು ವರ್ಷಗಳಿಂದ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂಥಹ ಕೆಲಸಗಳನ್ನು ಮಾಡುತ್ತಿದೆ. ಈ ಎಲ್ಲಾ ಯೋಜನೆಗಳನ್ನು ಪ್ರತಿಬಿಂಬಿಸುವ ವಾಹನದಲ್ಲಿ ಆರ್ಯಭಟ, ಭಾಸ್ಕರ, ಕ್ರಯೋಜನಿಕ್ ಇಂಜಿನ್, ಉಪಗ್ರಹ ಉಡಾವಣೆ, ಚಂದ್ರಯಾನ, ಮಂಗಳಯಾನ, ನೂತನ ಜಿಪಿಎಸ್ ತಂತ್ರಾಂಶ, ಬಾಹುಬಲಿ ರಾಕೇಟ್ ತಯಾರಿಕೆ, ಪಿಎಸ್‍ಎಲ್.ವಿ. ಜಿಎಸ್‍ಎಲ್‍ವಿ, ಸೇರಿದಂತೆ ಇಲ್ಲಿಯವರೆಗೆ ಇಸ್ರೋ ಕೈಗೊಂಡಿರುವ ಎಲ್ಲಾ ಯೋಜನೆಗಳ ಮಾದರಿಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳಿಗೆ ಸಾಕಷ್ಟು ಉಪಯೋಗವಾಗಲಿದೆ. ಒಂದೊಂದು ಮಾದರಿಯೂ ಸಹ ತನ್ನದೇ ಆದ ವೈಶಿಷ್ಟಗಳನ್ನು ಹೊಂದಿದ್ದು ಅವುಗಳ ಬಗ್ಗೆ ವಿದ್ಯಾರ್ಥಿಗಳು ತಿಳಿಯುವುದು ಅಗತ್ಯವಾಗಿದೆ ಎಂದರು. ಇಸ್ರೋ ನಿರ್ದೇಶಕಿ ಮಾಲತಿ ಮಾತನಾಡಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಸಹ ಉತ್ತಮವಾಗಿ ವ್ಯಾಸಂಗ ಮಾಡಿದರೆ ಇಸ್ರೋದಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಅದಕ್ಕೆ ಈ ಶಾಲೆಯ ಹಳೆಯ ವಿದ್ಯಾರ್ಥಿ ಆಕಾಶ್ ಉದಾಹರಣೆ. ಆದ್ದರಿಂದ ನೀವೆಲ್ಲರೂ ಉತ್ತಮವಾಗಿ ವ್ಯಾಸಂಗ ಮಾಡಿ ವಿವಿಧ ಪರೀಕ್ಷೆಗಳನ್ನು ಎದುರಿಸಬೇಕು. ಇಂಜಿನಿಯರಿಂಗ್‍ನ ಎಲ್ಲಾ ವಿಭಾಗಗಳಿಗೂ ಉದ್ಯೋಗದಲ್ಲಿ ವಿಪುಲ ಅವಕಾಶಗಳಿವೆ ಅವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಾವೆಲ್ಲರೂ ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ಹಗಲು, ರಾತ್ರಿ ಎಂಬುದು ಮರೀಚಿಕೆಯಾಗಿದ್ದು ನಮ್ಮ ಕೆಲಸ ಪೂರ್ಣಗೊಳ್ಳುವವರೆಗೂ ವಿಶ್ರಮಿಸದೇ ಕೆಲಸ ಮಾಡುತ್ತಿದ್ದು ಭಾರತಕ್ಕೆ ವಿಶ್ವಮಟ್ಟದಲ್ಲಿ ಸ್ಥಾನ ಪಡೆಯಲು ಶ್ರಮಿಸುತ್ತಿದ್ದೇವೆ ಎಂದರು. ಬಿಇಓ ಸೀತಾರಾಮು ಮಾತನಾಡಿ ಇಂದಿನ ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅದನ್ನು ಬಳಸಿಕೊಳ್ಳಬೇಕು. ಇದೇ ಗ್ರಾಮದ ಆಕಾಶ್ ಇಸ್ರೋದಲ್ಲಿ ತಾಂತ್ರಿಕ ಅಧಿಕಾರಿಯಾಗಿದ್ದು ತನ್ನ ಹುಟ್ಟೂರಿನ ಶಾಲಾ ಮಕ್ಕಳಿಗೆ ಈ ಮಹತ್ವದ ಪ್ರದರ್ಶನವನ್ನು ಮಾಡಿಸಬೇಕೆಂಬ ಆಸೆಯಿಂದ ಇಸ್ರೋ ಅಧಿಕಾರಿಗಳ ಗಮನಕ್ಕೆ ತಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಈ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಇಸ್ರೋದ ತಾಂತ್ರಿಕ ವಿಬಾಗದ ಇಂಜಿನಿಯರ್ ಆಕಾಶ್ ರವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಇಸ್ರೋ ಇಂಜಿನಿಯರ್ ಚಾಲ್ರ್ಸ್ ಬಾಸ್ಟಿನ್, ಉಪಪ್ರಾಂಶುಪಾಲ ರವಿಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಕೆ.ಮಂಜುನಾಥ್, ಶಿಕ್ಷಣ ಸಂಯೋಜಕ ವೇಣುಗೋಪಾಲ್, ಬಿಆರ್‍ಪಿ ಮೋಹನ್, ಕಾಲೇಜಿನ ಅಧ್ಯಾಪಕ ವರ್ಗ, ವಿವಿಧ ಶಾಲೆಗಳ ಸಾವಿರಾರು ಮಕ್ಕಳು ಪ್ರದರ್ಶನ ವಾಹನ ವೀಕ್ಷಿಸಿ ಸಂತಸಪಟ್ಟರು.