
ಮಾಸ್ಕೋ (ರಷ್ಯಾ), ಆ.೧೧- ರಷ್ಯಾದ ರೊಸ್ಕೊಸ್ಮೊಸ್ ಇದೀಗ ಬರೊಬ್ಬರಿ ೫೦ ವರ್ಷಗಳ ಬಳಿಕ ಮತ್ತೊಮ್ಮೆ ತನ್ನ ಶಕ್ತಿ ಅನಾವರಣಕ್ಕೆ ಸಿದ್ಧತೆ ನಡೆಸಿದೆ. ಚಂದ್ರನ ಮೇಲಿನ ವಾತಾವರಣವನ್ನು ಅಧ್ಯಯನ ನಡೆಸುವ ದೃಷ್ಟಿಯಿಂದ ರಷ್ಯಾದ ಬಾಹ್ಯಾಕಾಶ ಸಂಸ್ಥೆ ಇಂದು ಲುನಾ-೨೫ ಅನ್ನು ನಭಕ್ಕೆ ಚಿಮ್ಮಿಸಿದ್ದು, ಈ ಮೂಲಕ ೫೦ ವರ್ಷಗಳ ಬಳಿಕ ರಷ್ಯಾ ತನ್ನ ಶಕ್ತಿ ಪ್ರದರ್ಶಿಸಿದೆ. ಹಾಗಾಗಿ ಮುಂದಿನ ಐದು ದಿನಗಳಲ್ಲಿ ಚಂದ್ರನ ಕಕ್ಷೆಯನ್ನು ಲುನಾ-೨೫ ತಲುಪಲಿದ್ದು, ಹಾಗಾಗಿ ಭಾರತದ ಇಸ್ರೋದ ಚಂದ್ರಯಾನ-೩ರ ಜೊತೆ ನೇರವಾಗಿಯೇ ಆರೋಗ್ಯಕರ ಸ್ಪರ್ಧೆಗೆ ಇಳಿದಂತಾಗಿದೆ.
ಚಂದ್ರಯಾನ-೩ರ ಮೂಲಕ ಇಸ್ರೋ ಚಂದ್ರನ ದಕ್ಷಿಣ ಧ್ರುವಕ್ಕೆ ಈಗಾಗಲೇ ಪ್ರಯಾಣ ಬೆಳೆಸಿದ್ದು, ಕೆಲ ದಿನಗಳಲ್ಲಿ ಇದು ತಲುಪಲಿದೆ. ಒಂದು ವೇಳೆ ಇದು ಸಫಳತೆ ಕಂಡರೆ ಆಗ ಚಂದ್ರನ ದಕ್ಷಿಣ ಧ್ರುವಕ್ಕೆ ಪ್ರೋಬ್ ಕಳುಹಿಸಿದ ವಿಶ್ವದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಆದರೆ ರಷ್ಯಾದ ರೊಸ್ಕೊಸ್ಮೊಸ್ ಇದಕ್ಕೂ ಮುನ್ನವೇ ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿರಿಸಲು ಎಲ್ಲಾ ಯೋಜನೆ ಹಾಕಿಕೊಂಡಿದ್ದು, ಅದರಂತೆ ಇಂದು ಲುನಾ-೨೫ ಚಿಮ್ಮಿಸಿದೆ. ಹಾಗಾಗಿ ಒಂದು ವೇಳೆ ಇದು ಸಫಲತೆ ಕಂಡರೆ ಜಾಗತಿಕ ಮಟ್ಟದಲ್ಲಿ ಮೊದಲ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಹಾಗಾಗಿ ಈ ವಿಚಾರದಲ್ಲಿ ಭಾರತ ಹಾಗೂ ರಷ್ಯಾ ನಡುವೆ ನೇರವಾಗಿಯೇ ಆರೋಗ್ಯಕರ ಸ್ಪರ್ಧೆ ಏರ್ಪಟ್ಟಿದೆ. ಇನ್ನು ಸೋವಿಯತ್ ಯುಗದ ಸಮಯದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯುದ್ಬುತ ಸಾಧನೆ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಆಕರ್ಷಿಸಿದ್ದ ರೊಸ್ಕೊಸ್ಮೊಸ್ ಬಳಿಕ ಯುಎಸ್‌ಎಸ್‌ಆರ್ ವಿಂಗಡನೆಯ ಬಳಿಕ ಶಕ್ತಿ ಕಳೆಗುಂದಿತ್ತು. ೧೯೯೦ಕ್ಕೂ ಹಿಂದಿನ ಯುಎಸ್‌ಎಸ್‌ಆರ್ (ಸೋವಿಯತ್ ಯುಗ) ಸಮಯದಲ್ಲಿ ಬಲಿಷ್ಠ ಅಮೆರಿಕಾವನ್ನು ಹಿಂದಿಕ್ಕಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯದ್ಬುತ ಸಾಧನೆ ಪ್ರದರ್ಶಿಸಿದ್ದ ರಷ್ಯಾ ೧೯೭೬ರಂದು ಚಂದ್ರನ ಅಂಗಳಕ್ಕೆ ಕೊನೆಯ ಬಾರಿಗೆ ರಾಕೆಟ್ ಉಡಾಯಿಸಿತ್ತು. ಆದರೆ ಇಂದು ಬರೋಬ್ಬರಿ ೫೦ ವರ್ಷಗಳ ಬಳಿಕ ಲುನಾ-೨೫ ಹೆಸರಿನ ಪ್ರೋಬ್ ಮೂಲಕ ಚಂದ್ರನತ್ತ ಚಿಮ್ಮಿಸಿದೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೊಸ್ಕೊಸ್ಮೊಸ್ ಪ್ರಸಾರ ಮಾಡಿದ ನೇರ ಚಿತ್ರಗಳ ಪ್ರಕಾರ, ಲೂನಾ-೨೫ ಪ್ರೋಬ್‌ನೊಂದಿಗೆ ರಾಕೆಟ್ ಮಾಸ್ಕೋ ಸಮಯ ೨.೧೦ ಸುಮಾರಿಗೆ ವೊಸ್ಟೊಚ್ನಿ ಕಾಸ್ಮೊಡ್ರೋಮ್‌ನಿಂದ ನಭಕ್ಕೆ ಚಿಮ್ಮಿದೆ. ಇನ್ನು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯುವ ಮುನ್ನ ಲುನಾ-೨೫ ಸರಿಯಾದ ಸ್ಥಳವನ್ನು ಆಯ್ಕೆ ಮಾಡಲು ಮೂರರಿಂದ ಏಳು ದಿನಗಳವರೆಗೆ ಕಳೆಯುತ್ತದೆ ಎನ್ನಲಾಗಿದೆ. ಹಾಗಾಗಿ ಇಸ್ರೋ ಹಾಗೂ ರೊಸ್ಕೊಸ್ಮೋಸ್ ಬಹುತೇಕ ಒಂದೇ ಸಮಯದಲ್ಲಿ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿಯಲು ಸಿದ್ಧತೆ ನಡೆಸಿದೆ.