ಇಸ್ರೇಲ್ ರಾಕೆಟ್ ದಾಳಿ: 189 ಸಾವು

ಗಾಜಾ, ಡಿ.೨- ಕಳೆದೊಂದು ವಾರದಿಂದ ನಡೆಯುತ್ತಾ ಬಂದಿದ್ದ ಇಸ್ರೇಲ್ ಹಾಗೂ ಹಮಾಸ್ ನಡುವಿನ ಕದನ ವಿರಾಮವು ಅಚ್ಚರಿಯ ರೀತಿಯಲ್ಲೇ ಅಂತ್ಯಗೊಂಡಿದೆ. ಯುದ್ದ ವಿರಾಮ ಅಂತ್ಯಗೊಂಡ ಹಿನ್ನೆಲೆಯಲ್ಲಿ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಬರೊಬ್ಬರಿ ೧೮೦ ಮಂದಿ ಪ್ಯಾಲೆಸ್ತೀನ್ ನಾಗರಿಕರು ಮೃತಪಟ್ಟು, ೫೮೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಜಾಗತಿಕ ಮಟ್ಟದಲ್ಲಿ ಆಘಾತಕ್ಕೆ ಗುರಿಯಾಗಿದೆ. ಕದನ ವಿರಾಮ ವಿಸ್ತರಿಸುವ ಬಗೆಗಿನ ವಿಚಾರದಲ್ಲಿ ಯಾವುದೇ ಲಿಖಿತ ಒಪ್ಪಂದ ನಡೆಯದಿರುವ ಹಿನ್ನೆಲೆಯಲ್ಲಿ ಇಸ್ರೇಲ್ ತನ್ನ ದಾಳಿ ಮತ್ತೆ ಆರಂಭಿಸಿದೆ. ಅತ್ತ ಇಸ್ರೇಲ್‌ನ ಟೆಲ್ ಅವೀವ್ ಮೇಲೆ ಕೂಡ ಹಮಾಸ್ ಪಡೆ ರಾಕೆಟ್ ದಾಳಿ ಆರಂಭಿಸಿದ್ದು, ಒಟ್ಟಿನಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.
ಶುಕ್ರವಾರ ಬೆಳಗಿನ ಜಾವದ ನಂತರ ಕದನ ವಿರಾಮದ ಗಡುವು ಮುಗಿದ ನಂತರ ದಕ್ಷಿಣ ಗಾಜಾದ ಖಾನ್ ಯೂನಿಸ್‌ನ ಪೂರ್ವ ಪ್ರದೇಶಗಳ ಮೇಲೆ ಇಸ್ರೇಲ್ ತೀವ್ರ ಬಾಂಬ್ ದಾಳಿ ನಡೆಸಿದೆ. ಘಟನೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ. ದಾಳಿಯಲ್ಲಿ ಹೆಚ್ಚಿನ ಜನರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇಸ್ರೇಲಿ ವೈಮಾನಿಕ ದಾಳಿಯಲ್ಲಿ ೧೮೪ ಜನರು ಸಾವನ್ನಪ್ಪಿದ್ದಾರೆ, ಕನಿಷ್ಠ ೫೮೯ ಜನರು ಗಾಯಗೊಂಡಿದ್ದಾರೆ ಮತ್ತು ೨೦ ಕ್ಕೂ ಹೆಚ್ಚು ಮನೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಬದುಕುಳಿದಿರುವ ಸಂತ್ರಸ್ತ ನಾಗರಿಕರು ಪಶ್ಚಿಮದತ್ತ ತೆರಳುತ್ತಿರುವ ದೃಶ್ಯ ಕಂಡುಬಂದಿದೆ. ಕಳೆದ ಶುಕ್ರವಾರದಿಂದ ಆರಂಭವಾಗಿದ್ದ ನಾಲ್ಕು ದಿನಗಳ ಕದನ ವಿರಾಮವು ಬಳಿಕ ಸೋಮವಾರದಂದು ಮತ್ತೆರಡು ದಿನಗಳಿಗೆ ವಿಸ್ತರಣೆಯಾಗಿತ್ತು. ಪರಿಣಾಮ ಹಮಾಸ್ ಪಡೆ ತಮ್ಮಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುತ್ತಿದ್ದರು. ಅಲ್ಲದೆ ಅತ್ತ ಇಸ್ರೇಲ್ ಕೂಡ ಜೈಲುವಾಸದಲ್ಲಿದ್ದ ಪ್ಯಾಲೆಸ್ತೀನ್ ನಿವಾಸಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಗೊಳಿಸುತ್ತಿತ್ತು. ಅತ್ತ ಬಂಧಿತರು ಬಿಡುಗಡೆಯಾಗುತ್ತಿದ್ದರೆ ಮತ್ತೊಂದೆಡೆ ಯುಎನ್ ಸೇರಿದಂತೆ ಹಲವರು ಸಂಘ-ಸಂಸ್ಥೆಗಳು ಗಾಜಾ ಪಟ್ಟಿಯಲ್ಲಿ ಮಾನವೀಯ ನೆಲೆಯಲ್ಲಿ ರಕ್ಷಣಾ ಕಾರ್ಯ ಸೇರಿದಂತೆ ಪರಿಹಾರ ಸಾಮಾಗ್ರಿಗಳನ್ನು ನಿರಾಶ್ರಿತರಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿದ್ದವು. ಆದರೆ ಇದೀಗ ಆದರೆ ಇದೇ ಕದನ ವಿರಾಮದ ಅವಧಿಯ ನಡುವೆಯೇ ಇಸ್ರೇಲ್ ತನ್ನ ಸೇನಾ ಕಾರ್ಯಾಚರಣೆಯನ್ನು ಅಚ್ಚರಿಯ ರೀತಿ ಎಂಬಂತೆ ಪುನರ್ ಆರಂಭಿಸಿದ್ದು, ಗಾಜಾ ಪಟ್ಟಿಯ ಮೇಲೆ ಭೀಕರ ದಾಳಿ ಆರಂಭಿಸಿದೆ. ಇದರ ಪರಿಣಾಮ ಬರೊಬ್ಬರಿ ೧೮೦ ಪ್ಯಾಲೆಸ್ತೀನ್ ನಾಗರಿಕರು ಮೃತಪಟ್ಟಿದ್ದು, ಮೃತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಮೆರಿಕಾ ಮೇಲೆ ತೂಗುಕತ್ತಿ!
ಹಮಾಸ್ ಹಾಗೂ ಇಸ್ರೇಲ್ ನಡುವಿನ ಕದನ ಆರಂಭವಾದಂದಿನಿಂದ ಈಗಾಗಲೇ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಥನಿ ಬ್ಲಿಂಕೆನ್ ಅವರು ನಾಲ್ಕು ಬಾರಿ ಇಸ್ರೇಲ್‌ಗೆ ತೆರಳಿ, ಯುದ್ಧ ಮತ್ತಷ್ಟು ವಿಸ್ತರಣೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಅಲ್ಲದೆ ಒಂದರ್ಥದಲ್ಲಿ ಹೇಳುವುದಾದರೆ ಇದರಲ್ಲಿ ಬ್ಲಿಂಕೆನ್ ಅವರು ಕೊಂಚ ಸಫಲರೆ ಕೂಡ ಕಂಡಿದ್ದರು. ಇದರ ಪರಿಣಾಮ ಕಳೆದೊಂದು ವಾರದಿಂದ ಇಸ್ರೇಲ್ ಹಾಗೂ ಹಮಾಸ್ ನಡುವೆ ಕದನ ವಿರಾಮ ಏರ್ಪಟ್ಟಿತ್ತು. ಆದರೆ ಇದೀಗ ಇದೀಗ ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮತ್ತೆ ಮುಂದುವರೆಸಿರುವುದು ಅಮೆರಿಕಾ ಮೇಲೆ ಜಾಗತಿಕ ಒತ್ತಡ ಮೇಲೆ ಹೆಚ್ಚಿದೆ. ಯುದ್ಧ ನಿಲ್ಲಿಸುವಲ್ಲಿ ಅಮೆರಿಕಾ ವಿಫಲತೆ ಕಂಡಿದೆ ಎಂಬ ಆರೋಪ ಇದೀಗ ಮತ್ತೆ ಕೇಳಿಬಂದಿದೆ. ಇದರಿಂದ ಮತ್ತೆ ಎಚ್ಚೆತ್ತುಕೊಂಡಿರುವ ಅಮೆರಿಕಾ, ಇಸ್ರೇಲ್ ತನ್ನ ದಾಳಿಯನ್ನು ನಿಲ್ಲಿಸಿ, ಕದನ ವಿರಾಮ ನಡೆಸಬೇಕೆಂಬ ತನ್ನ ಹೇಳಿಕೆಯನ್ನು ಪುನರುಚ್ಛರಿಸಿದೆ.

ಇಸ್ರೇಲ್ ಮೇಲೆ ರಾಕೆಟ್ ದಾಳಿ
ಅತ್ತ ಕದನ ವಿರಾಮಕ್ಕೆ ಅಂತ್ಯಹಾಡಿ ಇಸ್ರೇಲ್ ಈಗಾಗಲೇ ಗಾಝಾ ಪಟ್ಟಿಯ ಮೇಲೆ ರಾಕೆಟೆ ದಾಳಿ ನಡೆಸಿದೆ. ಸದ್ಯ ಈ ದಾಳಿಗೆ ಪ್ರತಿಯಾಗಿ ಹಮಾಸ್ ಉಗ್ರರು ಕರಾವಳಿ ಪ್ರದೇಶದಿಂದ ಟೆಲ್ ಅವೀವ್ ಮೇಲೆ ರಾಕೆಟ್ ದಾಳಿ ನಡೆಸುತ್ತಿದ್ದಾರೆ. ಸದ್ಯ ಇಸ್ರೇಲ್‌ನಾದ್ಯಂತ ರಾಕೆಟ್ ದಾಳಿಯ ಬಗ್ಗೆ ಸೈರೆನ್ ಮೊಳಗುತ್ತಿದ್ದು, ನಾಗರಿಕರು ಅಡಗುದಾಣಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಈಗಾಗಲೇ ರಾಜಧಾನಿ ಟೆಲ್ ಅವೀವ್ ಗುರಿಯಾಗಿರಿಸಿ ಹಮಾಸ್ ಪಡೆ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು, ಆದರೆ ಇಲ್ಲಿ ಸಾವು-ನೋವಿನ ಯಾವುದೇ ವರದಿಯಾಗಿಲ್ಲ. ಹಾಗಾಗಿ ಮುಂದಿನ ಗಂಟೆಗಳಲ್ಲಿ ಎರಡೂ ಕಡೆಯಿಂದಲೂ ಭೀಕರ ದಾಳಿ ನಡೆಯುವ ಸಾಧ್ಯತೆ ಹೆಚ್ಚಿದೆ.

ಇಸ್ರೇಲ್‌ನಿಂದ ಕರಪತ್ರ ಹಂಚಿಕೆ!
ಶುಕ್ರವಾರ ಇಸ್ರೇಲ್ ವಾಯುಪಡೆಯು ತನ್ನ ವಿಮಾನದ ಮೂಲಕ ಗಾಜಾ ನಗರದ ಮೇಲೆ ಕರಪತ್ರಗಳನ್ನು ಕೆಳಗೆ ಬೀಳಿಸಿದ್ದು, ಇದರಲ್ಲಿ ನಾಗರಿಕರು ಕೂಡಲೇ ನಗರ ಬಿಟ್ಟು ತೆರಳುವಂತೆ ಮನವಿ ಮಾಡಲಾಗಿದೆ. ಇದರಿಂದ ಮುಂದಿನ ಗಂಟೆಗಳಲ್ಲಿ ಗಾಝಾ ನಗರವನ್ನೇ ಧ್ವಂಸ ಮಾಡುವ ಇಸ್ರೇಲ್‌ನ ಯೋಜನೆ ಬಹಿರಂಗವಾದಂತಾಗಿದೆ. ಆದರೆ ಮಾನವ ಹಕ್ಕುಗಳ ಗುಂಪುಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ನಾಗರಿಕರು ಸುರಕ್ಷಿತ ರೀತಿಯಲ್ಲಿ ಆಶ್ರಯ ಪಡೆದುಕೊಳ್ಳುವ ಯಾವುದೇ ಸ್ಥಳಗಳಿಲ್ಲ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ರಾಫ್ತಾ ಗಡಿ ಬಂದ್

ಅತ್ತ ಕಳೆದ ಹಲವು ದಿನಗಳಿಂದ ಗಾಜಾಗೆ ಮಾನವೀಯ ನೆಲೆಯಲ್ಲಿ ಪೂರೈಕೆಯಾಗುತ್ತಿದ್ದ ಪರಿಹಾರ ಸಾಮಾಗ್ರಿಗಳು ಬರುತ್ತಿದ್ದ ಈಜಿಪ್ಟ್ ಜೊತೆಗಿನ ರಾಫ್ತಾ ಗಡಿ ಪ್ರದೇಶವನ್ನು ಇದೀಗ ಇಸ್ರೇಲ್ ನಿರ್ಬಂಧಿಸಿದೆ. ಸದ್ಯ ಇಲ್ಲಿಂದ ಯಾವುದೇ ಪರಿಹಾರ ಸಾಮಾಗ್ರಿಗಳು ಗಾಜಾ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ಯಾಲೆಸ್ತೀನ್ ತಿಳಿಸಿದೆ. ಈ ಗಡಿ ಪ್ರದೇಶದ ಮೂಲಕವೇ ವಿಶ್ವಸಂಸ್ಥೆ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಪರಿಹಾರ ಸಾಮಾಗ್ರಿಗಳು ಗಾಜಾ ಪಟ್ಟಿ ಪ್ರವೇಶಿಸಿ, ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದ್ದವು. ಇದೇ ಅವಧಿಯಲ್ಲಿ ಇಸ್ರೇಲ್ ದಾಳಿ ಆರಂಭಿಸಿದ ಕೂಡಲೇ ಇದೀಗ ರಾಫ್ತಾ ಗಡಿ ಪ್ರದೇಶವನ್ನು ಮುಚ್ಚಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಿರಾಶ್ರಿತರ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಎಲ್ಲಾ ಸಾಧ್ಯತೆಗಳಿವೆ.