ಇಸ್ರೇಲ್ ದೇಶದ ಕೃಷಿ ಪದ್ದತಿಯಂತೆ 20 ಗುಂಟೆಯಲ್ಲಿ 56 ಟನ್ ಕಬ್ಬು ಬೆಳೆದ ಕುಮಾರ ಮಗೆಣ್ಣವರ

ಕಾಗವಾಡ : ನ.24:ಮಾಂಜರಿ ಗ್ರಾಮದ ಕುಮಾರ ಮಗೆಣ್ಣವರ ಇವರು ಇಸ್ರೇಲ್ ದೇಶದ ಕೃಷಿ ಪದ್ದತಿಯಂತೆ ಕಬ್ಬು ನಾಟಿ ಮಾಡಿ 20 ಗುಂಟೆಯಲ್ಲಿ 56 ಟನ್ ಕಬ್ಬು ಬೆಳೆದು ದಾಖಲೆ ನಿರ್ಮಿಸಿದ್ದಾರೆ. ಇವರ ಸಾಧನೆಗೆ ಸುತ್ತಮುತ್ತಲಿನ ಗ್ರಾಮಗಳ ರೈತರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸುತ್ತಿದ್ದಾರೆ.
ಮಾಜಿ ಶಾಸಕ, ಶಿರಗುಪ್ಪಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಕಲ್ಲಪ್ಪಣ್ಣ ಮಗೆಣ್ಣವರ ಇವರ ಸಹೋದರರಾದ ಕುಮಾರ ಮಗೆಣ್ಣವರ ಇವರು ಇಸ್ರೇಲ್ ಪದ್ದತಿಯಂತೆ 20 ಗುಂಟೆಯಲ್ಲಿ 56 ಟನ್ ಕಬ್ಬು ಬೆಳೆದು ದಾಖಲೆ ಮಾಡಿದ್ದಾರೆ. 20 ಗುಂಟೆ ಪ್ಲಾಟ್ ನಿರ್ಮಿಸಿ 44 ಅಡಿ ಅಂತರದಲ್ಲಿ 22 ಅಡಿ ಗುಂಡಿಗಳನ್ನು ತೆಗೆದು ಅದರಲ್ಲಿ ಫಲವತ್ತಾದ ಮಣ್ಣು, ಸಗಣಿ ಗೊಬ್ಬರ ಹಾಕಿ ಅದರಲ್ಲಿ 1110 ಜಾತಿಯ ಕಬ್ಬಿನ 25 ಗನಿಕೆಗಳನ್ನು ನಾಟಿ ಮಾಡಿ ನೀರು ಹಾಯಿಸಿದ್ದಾರೆ. ಸಮಯಕ್ಕೆ ಅನುಗುಣವಾಗಿ ಮಾಂಜರಿಯ ಲಕ್ಷ್ಮಿ ಅಗ್ರೋಟೆಕ್‍ನ ಚೇತನ ತೇಲಿಯವರ ಮಾರ್ಗದರ್ಶನದಂತೆ ರಸಗೊಬ್ಬರ ನೀರು ನೀಡಿದ್ದಾರೆ. ಅಲ್ಲದೇ 2 ಸಾಲುಗಳ ಮಧ್ಯೆ ಚೆಂಡು ಹೂವಗಳನ್ನು ನಾಟಿ ಮಾಡಿ ಆ ಮೂಲಕ 60 ಸಾವಿರಕ್ಕಿಂತ ಹೆಚ್ಚಿಗೆ ಆದಾಯವನ್ನು ಪಡೆದುಕೊಂಡಿದ್ದಾರೆ. ಕಬ್ಬು ನಾಟಿ ಮಾಡಿ 13 ತಿಂಗಳುಗಳ ನಂತರ ಕಟಾವು ಮಾಡಿದಾಗ 20 ಗುಂಟೆಯಲ್ಲಿ 56 ಟನ್ ಕಬ್ಬು ಬೆಳೆದು ದಾಖಲೆ ನಿರ್ಮಿಸಿದ್ದಾರೆ. ಇವರ ಆಧುನಿಕ ಕೃಷಿ ಪದ್ದತಿಯನ್ನು ವಿಕ್ಷೀಸಲು ಸುತ್ತಮುತ್ತಲಿನ ಗ್ರಾಮಗಳ ಕಬ್ಬು ಬೆಳೆಗಾರರು ಆಗಮಿಸಿ ಕುಮಾರ ಮಗೆಣ್ಣವರ ಇವರಿಂದ ಮಾರ್ಗದರ್ಶನ ಪಡೆದುಕೊಂಡು ತಾವು ಕೂಡ ಈ ಪದ್ದತಿಯನ್ನು ಅನುಸರಿಸಲು ಮುಂದಾಗುತ್ತಿದ್ದಾರೆ.
ಕಡಿಮೆ ಜಮೀನಿನಲ್ಲಿ ಅಧಿಕ ಇಳುವರಿ ಪಡೆದುಕೊಂಡು ಹೆಚ್ಚಿನ ಲಾಭಕ್ಕೆ ಈ ಭಾಗದ ರೈತರು ಕುಮಾರ ಮಗೆಣ್ಣವರ ಅವರ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಹಳೆಯ ಪದ್ದತಿಯನ್ನು ಮರೆತು ಆಧುನಿಕ ಕೃಷಿ ಪದ್ದತಿಗೆ ಈ ಭಾಗದ ರೈತರು ಮುಂದಾಗುತ್ತಿರುವುದು ಸಂತಸದ ಸಂಗತಿಯಾಗಿದೆ.