ಇಸ್ರೇಲ್ ದಾಳಿಗೆ ಛಾಯಾಗ್ರಾಹಕ ಬಲಿ

ಬೈರುತ್, ಅ.೧೪- ಇಸ್ರೇಲ್, ಹಮಾಸ್ ಘರ್ಷಣೆ ನಡುವೆ ಲೆಬನಾನ್‌ನ ದಕ್ಷಿಣ ಗ್ರಾಮವಾದ ಅಲ್ಮಾ ಅಲ್-ಶಾಬ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಿಂದ ಲೆಬನಾನಿನ ಛಾಯಾಗ್ರಾಹಕರೊಬ್ಬರು ಸಾವನ್ನಪ್ಪಿದ್ದು, ಇತರ ಆರು ವರದಿಗಾರರು ಗಾಯಗೊಂಡಿದ್ದಾರೆ. ರಾಯಿಟರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಲೆಬನಾನಿನ ಛಾಯಾಗ್ರಾಹಕ ಇಸಾಮ್ ಅಬ್ದಲ್ಲಾ ಮೃತಪಟ್ಟಿದ್ದಾರೆ. ಏಜೆನ್ಸ್ ಫ್ರಾನ್ಸ್-ಪ್ರೆಸ್ (ಎಎಫ್‌ಪಿ) ಮತ್ತು ಅಲ್-ಜಜೀರಾ ಟಿವಿ ಚಾನೆಲ್ ಸೇರಿದಂತೆ ಅಂತಾರಾಷ್ಟ್ರೀಯ ಏಜೆನ್ಸಿಗಳಲ್ಲಿ ಕೆಲಸ ಮಾಡುತ್ತಿದ್ದ ಇತರ ಆರು ವರದಿಗಾರರು ಗಾಯಗೊಂಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆಯ ವರದಿ ತಿಳಿಸಿದೆ.
ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಪ್ರಕಾರ, ಗಾಯಗೊಂಡ ಜನರನ್ನು ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ. ಲೆಬನಾನ್‌ನ ಮಂತ್ರಿಗಳ ಕೌನ್ಸಿಲ್, ಪ್ರಧಾನ ಮಂತ್ರಿ ನಜೀಬ್ ಮಿಕಾಟಿ ಅವರು ನೀಡಿದ ಹೇಳಿಕೆಯಲ್ಲಿ, ಇಸ್ರೇಲ್ ಲೆಬನಾನ್ ಮೇಲೆ ನಡೆಸಿದ ದಾಳಿ ವೇಳೆ, ನೇರವಾಗಿ ಪತ್ರಕರ್ತರನ್ನು ಗುರಿಯಾಗಿಸಿಕೊಂಡಿದ್ದನ್ನ ಖಂಡಿಸಿದರು. ಗಾಯಗೊಂಡ ವರದಿಗಾರರು ಶೀಘ್ರ ಚೇತರಿಸಿಕೊಳ್ಳಲಿ ಎಂದೂ ಅವರು ಹೇಳಿದ್ದಾರೆ.