ಇಸ್ರೇಲ್‌ ತನಿಖೆ ಬಗೆಗಿನ ಮತದಾನ: ಹೊರಗುಳಿದ ಭಾರತ

ನ್ಯೂಯಾರ್ಕ್‌, ಮೇ 2೮- ಇಸ್ರೇಲ್- ಫೆಲೆಸ್ತೀನ್ ಸಂಘರ್ಷದ ವೇಳೆ ಇಸ್ರೇಲ್ ಮತ್ತು ಜೆರುಸಲೇಂ ಸೇರಿದಂತೆ ಆಕ್ರಮಿತ ಫೆಲೆಸ್ತೀನ್ ಭಾಗದಲ್ಲಿ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಮತ್ತು ದೌರ್ಜನ್ಯಗಳು ನಡೆಯುತ್ತಿವೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಆಯೋಗವನ್ನು ನೇಮಿಸುವ ಸಂಬಂಧ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಮಂಡಿಸಿದ ನಿರ್ಣಯದ ಮೇಲಿನ ಮತದಾನದಿಂದ ಭಾರತ ಹೊರಗುಳಿದಿದೆ. ಮತದಾನದಿಂದ ದೂರ ಉಳಿದ 14 ದೇಶಗಳಲ್ಲಿ ಭಾರತ ಕೂಡ ಒಂದು.

ಹಮಾಸ್ ಸಂಘಟನೆ ಎಸಗಿರುವ ಭಯೋತ್ಪಾದಕ ಕೃತ್ಯಗಳನ್ನು ಮುಚ್ಚಿಹಾಕುವ ಪ್ರಯತ್ನ ಎಂದು ಇಸ್ರೇಲ್ ಈ ನಿರ್ಣಯವನ್ನು ಬಣ್ಣಿಸಿದೆ. 24 ದೇಶಗಳು ಈ ನಿರ್ಣಯದ ಪರವಾಗಿ ಮತ್ತು 9 ದೇಶಗಳು ವಿರುದ್ಧವಾಗಿ ಮತ ಚಲಾಯಿಸಿವೆ. ಮತದಾನದಿಂದ ದೂರ ಉಳಿದ 14 ದೇಶಗಳಲ್ಲಿ ಭಾರತವೂ ಸೇರಿದೆ. ಈ ತನಿಖೆಗೆ ಇಸ್ರೇಲ್ ಸಹಕರಿಸುವುದಿಲ್ಲ ಎಂದು ಇಸ್ರೇಲ್ ತಕ್ಷಣವೇ ಪ್ರತಿಕ್ರಿಯಿಸಿದೆ. ಈ ಸಮಸ್ಯೆ ಬಗ್ಗೆ ಚರ್ಚಿಸಲು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ, ಇತ್ತೀಚೆಗೆ ಘೋಷಿಸಿರುವ ಕದನ ವಿರಾಮ ಒಪ್ಪಂದವನ್ನು ಸ್ವಾಗತಿಸಿದರು ಹಾಗೂ ಎಲ್ಲರೂ ಗರಿಷ್ಠ ತಾಳ್ಮೆ ಪ್ರದರ್ಶಿಸಬೇಕು. ಸಂಘರ್ಷ ಉಲ್ಬಣಿಸುವ ಕ್ರಮಗಳಿಂದ ಹಿಂದೆ ಸರಿಯಬೇಕು ಮತ್ತು ಪೂರ್ವ ಜೆರುಸಲೇಂ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಯಥಾಸ್ಥಿತಿಯನ್ನು ಬದಲಿಸುವ ಏಕಪಕ್ಷೀಯ ಪ್ರಯತ್ನಗಳಿಂದ ದೂರೆ ಇರಬೇಕು ಎಂದು ಸಲಹೆ ಮಾಡಿದರು. ಜೆರುಸಲೇಂನಲ್ಲಿ ಹಿಂಸಾಚಾರ ಮುಂದುವರಿದ ಬಗ್ಗೆ ನಮಗೆ ತೀವ್ರ ಕಳವಳ ಇದೆ. ಈ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಮಾತುಕತೆಯೊಂದೇ ಸೂಕ್ತ ಮಾರ್ಗ ಎನ್ನುವ ದೃಢವಾದ ನಂಬಿಕೆ ಭಾರತದ್ದು ಎಂದು ಸ್ಪಷ್ಟಪಡಿಸಿದರು.