ಇಸ್ರೇಲ್‌ನ ಶಸ್ತ್ರಾಸ್ತ್ರ ಪೂರೈಕೆ ಸ್ಥಗಿತ

ವಾಷಿಂಗ್ಟನ್, ಮೇ ೯- ಈಗಾಗಲೇ ಗಾಜಾದ ಹಲವು ಕಡೆಗಳಲ್ಲಿ ದಾಳಿ ನಡೆಸಿರುವ ಇಸ್ರೇಲ್ ಪಡೆ ಇದೀಗ ರಫಾದಲ್ಲೂ ಕಾರ್ಯಾಚರಣೆ ನಡೆಸಲು ಮುಂದಾಗಿದ್ದು, ಜಾಗತಿಕ ಸಮುದಾಯ ಆತಂಕಕ್ಕೆ ಒಳಗಾಗಿದೆ. ಈ ನಡುವೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದು, ರಫಾದಲ್ಲಿ ಪ್ರಮುಖ ಭೂ ಕಾರ್ಯಾಚರಣೆಯನ್ನು ಪ್ರಾರಂಭಿಸಿದರೆ ಯುಎಸ್ ಕೆಲವು ಶಸ್ತ್ರಾಸ್ತ್ರಗಳ ಪೂರೈಕೆಯನ್ನು ನಿಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬೈಡೆನ್, ರಫಾ ಮೇಲೆ ಇಸ್ರೇಲ್ ಭೂ ಕಾರ್ಯಾಚರಣೆಯನ್ನು ನಡೆಸಿದರೆ ನಾವು ನೀಡುತಿದ್ದ ನಾವು ಶಸ್ತ್ರಾಸ್ತ್ರಗಳು ಮತ್ತು ಫಿರಂಗಿ ಶೆಲ್‌ಗಳನ್ನು ಪೂರೈಸಲು ಹೋಗುವುದಿಲ್ಲ. ಆದರೆ ಇಸ್ರೇಲ್ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದನ್ನು ನಾವು ಮುಂದುವರಿಸುತ್ತೇವೆ. ರಫಾದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಇಸ್ರೇಲ್ ನಡೆಸಿದ ನೆಲದ ಕಾರ್ಯಾಚರಣೆ ಎಂದು ಯುಎಸ್ ವ್ಯಾಖ್ಯಾನಿಸಿಲ್ಲ. ಇಸ್ರೇಲ್ ಅಲ್ಲಿನ ಜನಸಂಖ್ಯಾ ಕೇಂದ್ರಗಳಿಗೆ ಹೋಗಿಲ್ಲ. ಅದರಲ್ಲೂ ಇಸ್ರೇಲ್ ಗಡಿಯಲ್ಲಿ ಮಾಡಿದ್ದು ಸರಿಯಾಗಿದೆ. ಆದರೆ ಒಂದು ವೇಳೆ ಇಸ್ರೇಲ್ ಜನಸಂಖ್ಯಾ ಕೇಂದ್ರಗಳಿಗೆ ಹೋದರೆ ಅಮೆರಿಕಾ ಬೆಂಬಲವನ್ನು ಪಡೆಯುವುದಿಲ್ಲ ಎಂದು ತಿಳಿಸಿದ ಬೈಡೆನ್, ಇಸ್ರೇಲ್ ಕೆಂಪು ಗೆರೆಯನ್ನು ದಾಟಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ ಎಂದು ತಿಳಿಸಿದರು. ಈ ಹಿಂದೆ ಇಸ್ರೇಲ್‌ಗೆ ಅಮೆರಿಕಾ ನೀಡುತಿದ್ದ ವಿನಾಶಕಾರಿ ಬಾಂಬ್‌ಗಳ ಪೂರೈಕೆಯನ್ನು ವಿಳಂಬ ಮಾಡಿದ್ದು, ಸಹಜವಾಗಿಯೇ ಇದರಿಂದ ಇಸ್ರೇಲ್ ಅಸಮಾಧಾನಗೊಂಡಿದೆ ಎನ್ನಲಾಗಿದೆ. ಆದರೆ ಇವುಗಳು ಭವಿಷ್ಯದ ಪೂರೈಕೆಗೆ ಮಾತ್ರ ಸಂಬಂಧಿಸಿದ್ದು, ಹಾಗಾಗಿ ತಕ್ಷಣದ ಅವಧಿಗೆ ಇದು ಪರಿಣಾಮ ಬೀರಲ್ಲ ಎನ್ನಲಾಗಿದೆ. ಈ ನಡುವೆ ರಫಾ ಕಾರ್ಯಾಚರಣೆಗೆ ಸಂಬಂಧಿಸಿದ ಗೊಂದಲಗಳನ್ನು ನಾವು ಶಮನಗೊಳಿಸುತ್ತೇವೆ ಎಂದು ಇಸ್ರೇಲ್ ತಿಳಿಸಿದೆ. ಇನ್ನು ಅಮೆರಿಕಾ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹಲವು ರಾಷ್ಟ್ರಗಳು ಇಸ್ರೇಲ್ ರಫಾದಲ್ಲಿ ನಡೆಸಲಿರುವ ಕಾರ್ಯಾಚರಣೆಯ ವಿರುದ್ಧ ಧ್ವನಿ ಎತ್ತಿದೆ. ಅದರಲ್ಲೂ ಗಾಝಾದ ಉಳಿದ ಕಡೆಗಳಿಂದ ಹೆಚ್ಚಿನ ನಿರಾಶ್ರಿತರು ರಫಾದಲ್ಲಿದ್ದು, ಒಂದು ವೇಳೆ ಇಲ್ಲಿ ಕಾರ್ಯಾಚರಣೆ ನಡೆದರೆ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣ ಹಾನಿ ಸಂಭವಿಸಲಿದೆ ಎನ್ನಲಾಗಿದೆ.