ಇಸ್ರೇಲ್‌ಗೆ ಮಾ. ೧೦ ಗಡುವು

ಜೆರುಸಲೆಂ (ಇಸ್ರೇಲ್), ಫೆ.೧೯- ಈಜಿಪ್ಟ್ ಗಡಿ ಪ್ರದೇಶವಾಗಿರುವ ರಫಾ ಮೇಲಿನ ದಾಳಿಗೆ ಸಂಬಂಧಿಸಿದಂತೆ ಇದೀಗ ಕಠಿಣ ಎಚ್ಚರಿಕೆ ನೀಡಿದೆ. ಮಾರ್ಚ್ ೧೦ರೊಳಗೆ ಗಾಜಾದಲ್ಲಿರುವ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದಲ್ಲಿ ರಫಾದಲ್ಲಿ ನಾವು ತೀವ್ರ ಆಕ್ರಮಣ ಪ್ರಾರಂಭಿಸುತ್ತೇವೆ ಎಂದು ಇಸ್ರೇಲಿ ಯುದ್ಧ ಕ್ಯಾಬಿನೆಟ್ ಸದಸ್ಯ ಬೆನ್ನಿ ಗ್ಯಾಂಟ್ಜ್ ಎಚ್ಚರಿಕೆ ನೀಡಿದ್ದಾರೆ.
ರಂಜಾನ್ ವೇಳೆಗೆ ನಮ್ಮ ದೇಶದ ಒತ್ತೆಯಾಳುಗಳು ಮನೆಯಲ್ಲಿ ಇರದಿದ್ದರೆ ರಫಾ ಮೇಲಿನ ದಾಳಿ ನಡೆಸಲಾಗುವುದು ಎಂಬ ಸಂಗತಿ ಹಮಾಸ್ ಹಾಗೂ ಜಗತ್ತಿನ ನಾಯಕರಿಗೆ ತಿಳಿದಿರಬೇಕಿದೆ. ನಾಗರಿಕ ಸಾವು-ನೋವುಗಳನ್ನು ಕಡಿಮೆ ಮಾಡಲು ಅಮೆರಿಕಾ ಮತ್ತು ಈಜಿಪ್ಟಿನ ಪಾಲುದಾರರೊಂದಿಗೆ ಸಂವಾದದಲ್ಲಿ ನಾಗರಿಕರನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಬೆನ್ನಿ ಗ್ಯಾಂಟ್ಜ್ ತಿಳಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಗಾಜಾದ ಜನನಿಬಿಡತ ದಕ್ಷಿಣ ನಗರವಾಗಿರುವ ರಫಾ ಮೇಲಿನ ದಾಳಿಯ ದಿನಾಂಕವನ್ನು ಇಸ್ರೇಲ್ ಘೋಷಿಸಿದೆ. ಆದರೆ ಸುಮಾರು ೧೫ ಲಕ್ಷ ಮಂದಿ ವಾಸ್ತವ್ಯ ಹೊಂದಿರುವ ರಫಾ ಮೇಲಿನ ದಾಳಿಗೆ ಈಗಾಗಲೇ ಜಾಗತಿಕ ಸಮೂಹಲ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದಕ್ಕೂ ಮುನ್ನ ಇಸ್ರೇಲಿ ದಾಳಿಯ ನಂತರ ಪ್ರಮುಖ ಗಾಝಾ ಆಸ್ಪತ್ರೆಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ ಎಂದು ಯುಎನ್ ಸಾರ್ವಜನಿಕ ಆರೋಗ್ಯ ಸಂಸ್ಥೆ ಹೇಳಿದೆ. ಇನ್ನು ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್) ಈಗಾಗಲೇ ಸಂಕೀರ್ಣವನ್ನು ಪ್ರವೇಶಿಸಿದ್ದು, ಹಮಾಸ್ ಒತ್ತೆಯಾಳುಗಳನ್ನು ಅಲ್ಲಿ ಇರಿಸಲಾಗಿದೆ ಎಂದು ಗುಪ್ತಚರ ವರದಿ ಸೂಚಿಸಿದೆ ಎಂದು ಹೇಳಿದೆ. ಇಸ್ರೇಲಿ ಯುದ್ಧ ಕ್ಯಾಬಿನೆಟ್ ದೇಶದ ಉನ್ನತ ಭದ್ರತಾ ಅಧಿಕಾರಿಗಳನ್ನು ಒಳಗೊಂಡಿದೆ. ಅಕ್ಟೋಬರ್ ೭ ರಂದು ಇಸ್ರೇಲ್ ಮೇಲೆ ದಾಳಿ ಮಾಡಿ ಕನಿಷ್ಠ ೧,೨೦೦ ಜನರನ್ನು ಕೊಂದು ೨೫೩ ಒತ್ತೆಯಾಳುಗಳನ್ನು ತೆಗೆದುಕೊಂಡ ಹಲವಾರು ದಿನಗಳ ನಂತರ ಇದನ್ನು ರಚಿಸಲಾಯಿತು.