ಇಸ್ಕಾನ್‌ ವತಿಯಿಂದ ಪೊಲೀಸ್‌ ಸಿಬ್ಬಂದಿಗೆ ಊಟದ ವ್ಯವಸ್ಥೆ

ಮಂಗಳೂರು, ಎ.2೯- ಲಾಕ್‌ಡೌನ್ ಸಂದರ್ಭ ನಗರದಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಈಗಾಗಲೆ ಆರಂಭಗೊಂಡು ಯಶಸ್ವಿಯಾಗಿದೆ. ಇದೀಗ ಇಸ್ಕಾನ್ ಕುಡುಪು ಕಟ್ಟೆ ವತಿಯಿಂದ ಪ್ರತಿ ದಿನ ಸಂಜೆ 6ರಿಂದ ರಾತ್ರಿ 8ರವರೆಗೆ ಆರಂಭಿಸಲಾದ ರಾತ್ರಿ ಊಟದ ವ್ಯವಸ್ಥೆಗೆ ಬುಧವಾರ ಚಾಲನೆ ನೀಡಲಾಯಿತು.

ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಊಟದ ವ್ಯವಸ್ಥೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಲಾಕ್‌ಡೌನ್ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಇಸ್ಕಾನ್ ಕುಡುಪು ಕಟ್ಟೆ ವತಿಯಿಂದ ನಡೆಸಿರುವುದು ಶ್ಲಾಘನೀಯ ಎಂದರು. ಕಳೆದ ಲಾಕ್‌ಡೌನ್ ಅವಧಿಯಲ್ಲೂ ನಗರದ ಹಲವು ಕಡೆ ಹಸಿದವರಿಗೆ ಅನ್ನ ನೀಡುವ ಕೆಲಸ ಮಾಡಿದ್ದೇವೆ. ಈ ಬಾರಿ ಪ್ರಥಮವಾಗಿ ಪೊಲೀಸ್ ಇಲಾಖೆಗೆ ನೀಡುವ ಮೂಲಕ ಆರಂಭಿಸಿಸಲಾಗಿದೆ ಎಂದು ಇಸ್ಕಾನ್ ಕುಡುಪು ಕಟ್ಟೆಯ ಡಾ.ಸುತಾಪದಾಸ್ ನುಡಿದರು. ದ.ಕ.ಜಿಲ್ಲಾ ಎಸ್ಪಿಋಕೇಶ್ ಸೋನಾವಣೆ, ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ ಗಾಂವ್ಕರ್, ಇಸ್ಕಾನ್‌ನ ಲಕ್ಷ್ಮಣ್‌ದಾಸ್‌ ಉಪಸ್ಥಿತರಿದ್ದರು.