ಇಷ್ಟಾರ್ಥ ಪೂರೈಸುವ ರಾಮಲಿಂಗ ಕಾಮಣ್ಣ

(ಪರಶುರಾಮ ಹಕ್ಕರಕಿ)
ನವಲಗುಂದ : ಪಟ್ಟಣದ ಶ್ರೀ ರಾಮಲಿಂಗ ಕಾಮಣ್ಣನು ರಾಜ್ಯ ಹೊರರಾಜ್ಯದಿಂದ ಭಕ್ತರನ್ನು ಗಳಿಸಿರುವ ಇಷ್ಟಾರ್ಥ ಪುರುಷನಾಗಿ ಪೂಜೆಗೊಳ್ಳುತ್ತಿರುವ ಕಾಮದೇವನಾಗಿದ್ದಾನೆ.
ಮಾರ್ಚ ತಿಂಗಳಲ್ಲಿ ಬರುವ ಹೋಳಿ ಹುಣ್ಣಿಮೆ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡು ಪ್ರತಿ ಓಣಿಯಲ್ಲಿಯೂ ಏಕಾದಶಿ ರಾತ್ರಿಯಿಂದ ಕಾಮಣ್ಣನ ಪ್ರತಿಷ್ಠಾಪನೆಯಲ್ಲಿ ತೊಡಗಿಕೊಳ್ಳುತ್ತಾರೆ. ಭಯ, ಭಕ್ತಿ, ಶ್ರದ್ಧೆಯಿಂದ ವೈಭವದ ಆಚರಣೆಗೆ ಸಿದ್ದತೆ ಮಾಡುತ್ತಾರೆ. ಹಿಂದು-ಮುಸ್ಲಿಂ ಬಾಂಧವರು ಸೇರಿಕೊಂಡು ಹಿಂದು ಪದ್ದತಿಯಂತೆ ಹಗಲಿರುಳೆನ್ನದೇ ಶ್ರಮವಹಿಸಿ ಪ್ರತಿಷ್ಟಾಪನೆಯಿಂದ ಹಿಡಿದು ಕಾಮ ದಹನದವರೆಗೂ ಸೇವೆ ಸಲ್ಲಿಸುತ್ತಾರೆ. ಪ್ರತಿಯೊಂದು ಓಣಿಯಲ್ಲಿ ಪ್ರತಿಷ್ಠಾಪಿಸಲಾದ ಕಾಮಣ್ಣಗಳಲ್ಲಿ ಇಷ್ಟಾರ್ಥ ಪೂರೈಸಿಕೊಳ್ಳಲು ಮಹಿಳೆಯರು ಉಪವಾಸ ವೃತ ಮಾಡಿ ಭಕ್ತಿಯಿಂದ ಪೂಜಿಸಿ ಹರಕೆ ತೀರಿಸುತ್ತಾರೆ.

ರಾಮಲಿಂಗ ಕಾಮಣ್ಣನ ಐತಿಹಾಸಿಕ ಹಿನ್ನಲೆ:
ಸವಣೂರ ನವಾಬರ ಆಡಳಿತಾವದಿಯಲ್ಲಿ ಸಿದ್ದಿ ಪುರುಷನೂಬ್ಬ ವಿಶೇಷ ನಕ್ಷತ್ರ ದಿನದಂದು ವಿವಿಧ ಬಗೆಯ ಗಿಡಮೂಲಿಕೆ ಕಟ್ಟೆಗೆಗಳನ್ನು ಆಯ್ದು ತಂದು ಕಾಮಕಾಷ್ಠ ಮೂರ್ತಿ ರಚಿಸಲು ಸಿದ್ದನಾದ. ಇದೇ ವೇಳೆ 99 ಗಿಡಮೂಲಿಕೆ ಕಟ್ಟೆಗೆಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಸಂಕಲ್ಪಕ್ಕೆ ಮುಂದಾದ. ಆದರೆ ಇನ್ನೊಂದು ಗಿಡಮೂಲಿಕೆ ಕಟ್ಟಗೆ ಸಿಕ್ಕಿದ್ದರೆ ಆತನ ಲೌಕಿಕ ಸಂಕಲ್ಪದ ಮೂರ್ತಿಗೆ ಜೀವಕಳೆ ಬರುತ್ತಿತ್ತು ಎಂಬ ಪ್ರತೀತಿ ಇದೆ. ಅಷ್ಟರಲ್ಲಿ ದೈವ ಪುರುಷ ದೈವಾದೀನನಾದರೆಂದು ಹೇಳುತ್ತಾರೆ. ಇನ್ನೊಂದು ಮೂಲಿಕೆ ಜೋಡಣೆಗಾಗಿ ಆತ ಕೊರೆದ ರಂದ್ರ ಇಂದಿಗೂ ಕಾಣಬಹುದು. ನೂರಾರು ವರ್ಷದ ಹಿಂದೆಯೇ ಸಿದ್ದಿ ಪುರಷನ ಹಸ್ತದಿಂದ ತಯಾರಿಸಿದ ಮೂರ್ತಿಯನ್ನು ನವಲಗುಂದ ಪಟ್ಟಣಕ್ಕೆ ಯಾರು ಬರಮಾಡಿಕೊಂಡರೆಂಬುದು ಇಂದಿಗೂ ನಿಗೊಢಾಸ್ಪದವಾಗಿ ಉಳಿದಿದೆ.
ಇಷ್ಟಾರ್ಥ ಪೂರೈಸುವ ಆದಿದೇವನಾಗಿರುವದಂತು ಸತ್ಯ. ಸಂತಾನವಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಕರುಣಿಸಲು ಬೆಳ್ಳಿಯ ತೊಟ್ಟಿಲು, ಕಂಕಣ ಬಾಗ್ಯಕ್ಕಾಗಿ ಬೆಳ್ಳಿಯ ಬಾಸಿಂಗ, ಅನಾರೋಗ್ಯ ನಿವಾರಣೆಗೆ ಬೆಳ್ಳಿ ಕುದುರೆ, ಮನೆ ವಸತಿ ಇಲ್ಲದವರು ಛತ್ರಿ ಛಾಮರ, ಉದ್ಯೋಗ ಬದುಕಿಗೆ ನೆಲೆ ಕಂಡುಕೊಳ್ಳಬೇಕಾದರೆ ಬೆಳ್ಳಿ ಪಾದ ಅಥವಾ ಕುದುರೆ ಹರಕೆ ಹೊತ್ತು ಪೂಜಿಸಿದರೆ ಸಾಕು ಅವರ ಬೇಡಿಕೆ ಖಂಡಿತ ಈಡೇರುತ್ತದೆ ಎಂಬ ಪ್ರ್ರತೀತಿಗೆ ಹೆಸರಾಗಿದೆ. ಇಷ್ಠಾರ್ಥ ಸಿದ್ದಿ ಕಲ್ಪಸಿದ ನಂತರ ಇನ್ನೊಂದು ಬೆಳ್ಳಿ ಸಾಮಗ್ರಿ ಕಾಮಣ್ಣನಿಗೆ ಸಮರ್ಪಿಸಬೇಕು. ಹರಕೆ ತೀರಿಸುವ ಭಕ್ತರಿಗೆ ಸಂಘಟಕರೇ ಶುಲ್ಕ ವಿಧಿಸಿ ಪೂಜೆ ಪೂರೈಸುತ್ತಾರೆ. ರಾಜ್ಯ ಹೊರರಾಜ್ಯದಿಂದ ಆಗಮಿಸಿದ ಭಕ್ತರು ರಾಮಲಿಗೇಶ್ವರ ದೇವಸ್ಥಾನದಿಂದ ಸುಮಾರು ಎರಡು ಕೀ.ಮೀ ದೂರದವರೆಗೆ ಸರತಿ ಸಾಲಿನಲ್ಲಿ ನಿಂತು ಸುಡುಬಿಸಿಲಿನಲ್ಲಿಯೇ ಭಕ್ತರು ದರ್ಶನ ಪಡೆಯುತ್ತಾರೆ.
ಪಟ್ಟಣದ ಒಟ್ಟು 14 ಕಡೆಗಳಲ್ಲಿ ಕಾಮಣ್ಣ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಪೂರ್ವಜರ ಕಾಲದಿಂದಲೂ ಆಯಾ ಓಣಿಯಲ್ಲಿ À ಕಾಮಣ್ಣನ ಪ್ರತಿಷ್ಠಾಪಿಸಿ ಐದು ದಿನದವರೆಗೂ ರಗ್ಗ ಹಲಗಿ ಪಡೆದು ಹೊಳಿ ಹಬ್ಬವನ್ನು ವೈಶಿಷ್ಟ ಪೂರ್ಣವಾಗಿ ಆಚರಣೆ ಮಾಡುತ್ತಾ ಬಂದಿರುತ್ತಾರೆ. ಎಲ್ಲ ಕಾಮಣ್ಣಗಳು ಸರದಿ ಸಾಲಿನಲ್ಲಿ ವಿಶೇಷವಾಗಿ ರಾಮಲಿಂಗ ಕಾಮಣ್ಣನ ದರ್ಶನ ಮಾಡಿ ಅಗ್ನಿಸ್ಪರ್ಶವಾಗುತ್ತವೆ. ಮಹಿಳೆಯರು ತಮ್ಮ ಇಷ್ಟಾರ್ಥ ಪೂರೈಸುವ ಕಾಮಣ್ಣಗಳಿಗೆ ಹರಕೆ ತಿರಿಸಿ ವಿವಿಧ ಬಗೆಯ ಸಿಹಿ ತಿನಿಸುಗಳನ್ನು ಮಾಡಿ ಹಬ್ಬವನ್ನು ಆಚರಿಸುತ್ತಾರೆ.
ಹುಣ್ಣಿಮೆ ಮರುದಿನ ರಾಮಲಿಂಗ ಕಾಮಣ್ಣನ ಮೆರವಣಿಗೆ ನಡೆಸಿ ಬೆಳಿಗ್ಗೆ ಕಾಮದಹನ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ರಾಮಲಿಂಗ ಕಾಮಣ್ಣನ ಮೂಲ ಮೂರ್ತಿ ತೆಗೆದು ಅದರ ಬದಲಾಗಿ ಗಡಿಗೆ ಹಾಕಿ ಅಗ್ನಿಸ್ಪರ್ಶ ಮಾಡಲಾಗುತ್ತದೆ. ದಹನಗೊಳ್ಳುತ್ತಿರುವ ಕಾಮಣ್ಣನ ಗಡಿಗೆ ಮುಂದೆ ಬಿದ್ದರೆ ಮುಂಗಾರು ಉತ್ತಮ ಫಸಲು, ಹಿಂದೆ ವಾಲಿದರೆ ಹಿಂಗಾರಿ ಫಸಲು ಉತ್ತಮವಾಗಿ ಬರುತ್ತದೆಂಬ ವಾಡಿಕೆ ಇದೆ.
ಪೂಜಾರಿಗಳೇ ಇಲ್ಲ: ಪ್ರತಿಯೊಂದು ದೇವಸ್ಥಾನದಲ್ಲಿ ಒಬ್ಬ ಪೂಜಾರಿ ಅಥವಾ ಪುರೋಹಿತನಿರುತ್ತಾನೆ. ಆದರೆ, ರಾಮಲಿಂಗ ದೇವಸ್ಥಾನದಲ್ಲಿರುವ ಕಾಮಣ್ಣನಿಗೆ ಯಾವುದೇ ಪೂಜಾರಿ ಇಲ್ಲದಿರುವುದು ವಿಶೇಷ. ಹೋಳಿ ಹುಣ್ಣಿಮೆ ಪೂಜಾ ವಿಧಿ-ವಿಧಾನದಲ್ಲಿಯೋ ಕೂಡ ಮಂತ್ರ ಘೋಷಣೆ, ಅರ್ಚನೆಯೂ ಇಲ್ಲ. ಭಕ್ತರೆ ಪೂಜೆ ಸಲ್ಲಿಸಿ ಹರಕೆ ಹೊರುವ ಸಂಪ್ರದಾಯ ಇಲ್ಲಿದೆ. ಎಲ್ಲಡೇ ಹೋಳಿ ಹುಣ್ಣಿವೆ ದಿವಸ ಕಾಮಣ್ಣನನ್ನು ಪ್ರತಿಷ್ಠಾಪಿಸಿ ಬಣ್ಣದ ಓಕುಳಿ ಮೂಲಕ ಮೋಜಿನಿಂದ ಮಜಲು, ಹಲಗೆ ಬಾರಿಸುತ್ತ ಹಬ್ಬವನ್ನು ಆಚರಿಸುತ್ತಾರೆ. ಆದರೆ, ನವಲಗುಂದ ಪಟ್ಟಣದಲ್ಲಿ ಮಾತ್ರ ಭಯ, ಭಕ್ತಿ, ಶ್ರದ್ಧಾಪೂರ್ವಕದಿಂದ ಜಾತ್ರೆ ಮಹೋತ್ಸವದಂತೆ ಆಚರಿಸುತ್ತಿರುವುದು ಇಲ್ಲಿನ ವೈಶಿಷ್ಟ್ಯ.

ಬಾಕ್ಸ್ ಸುದ್ದಿ : ದಿನಾಂಕ 03-03-2023 ನೇ ಶುಕ್ರವಾರ ಏಕಾದಶಿ ರಾತ್ರಿಯಂದು ರಾಮಲಿಂಗ ಕಾವiಣ್ಣನ ಪ್ರತಿಸ್ಥಾಪನೆ, ಶನಿವಾರ ದಿ. 04-3-2023 ರ ಬೆಳಿಗ್ಗೆ ಭಕ್ತರ ದರ್ಶನ ಪ್ರಾರಂಭ. ಮಾ-07 ಹೋಳಿ ಹುಣ್ಣಿಮೆ, ಮಾ-08 ನೇ ಬುಧವಾರ ದಿವಸ ಬಣ್ಣದಾಟ (ಓಕುಳಿ) ರಾತ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಮಲಿಂಗ ಕಾಮಣ್ಣ ಹಾಗೂ ವಿವಿಧ 14 ಕಡೆಗಳಲ್ಲಿ ಪ್ರತಿಷ್ಠಾಪಿಸಿದ ಇತಿಹಾಸ ವೈಶಿಷ್ಟಿ ಪೂರ್ಣ ಕಾಮಣ್ಣಗಳ ನಡೆದುಬಂದಂತೆಯೇ ವಿಜೃಂಭಣೆಯಿಂದ ರಗ್ಗ ಹಲಗಿ, ವಾಧ್ಯಮೇಳದೊಂದಿಗೆ ಮೆರವಣೆಗೆ ನಡೆಯಲಿದೆ. ಉಳಿದ ಕಾಮಣ್ಣಗಳ ಅಗ್ನಿಸ್ಪರ್ಶದ ನಂತರ ಇಷ್ಟಾರ್ಥ ಸಿದ್ದಿ ರಾಮಲಿಂಗ ಕಾಮಣ್ಣನ ದಹನವಾಗುತ್ತದೆ.