ಇಷ್ಟಲಿಂಗ ಪೂಜೆ ಯಾವುದೇ ತಾರತಮ್ಯವಿಲ್ಲದೆ ಸಮಾನತೆ ಸಾರುತ್ತದೆ – ಶ್ರೀಗಳು

ಜು.೧೫ ರಿಂದ ೨೧ ರವರೆಗೆ ಇಷ್ಟಲಿಂಗ ಮಹಾಪೂಜೆ
ರಾಯಚೂರು, ಜು.೧೬- ಇಷ್ಟಲಿಂಗ ಪೂಜೆ ಯಾವುದೇ ತಾರತಮ್ಯವಿಲ್ಲದೆ ಸಮಾನತೆಯನ್ನು ಸಾರುತ್ತದೆ ಎಂದು ಶ್ರೀಮದ್ ಕಾಶೀಜ್ಞಾನ ಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಭಗವತ್ಪಾದರು ಹೇಳಿದರು.
ಅವರಿಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಇಂದು ಬೆಳಿಗ್ಗೆ ಸಹಸ್ರಾರು ಸಂಖ್ಯೆಯಲ್ಲಿ ಇಷ್ಟಲಿಂಗ ಪೂಜೆಯಲ್ಲಿ ಸದ್ಭಕ್ತರು ಪಾಲ್ಗೊಂಡಿದ್ದರು ಎಂದುರು.
ದೇಹ ಸದೃಢವಾಗಿರಲು ಆಹಾರ ಬೇಕಾಗಿರುವಂತೆ ಬುದ್ಧಿ ಶುದ್ಧಿಗೆ ಒಳ್ಳೆಯ ವಿಚಾರಗಳ ಅಗತ್ಯ ಇದೆ. ಇಂತಹ ವಿಚಾರಗಳು ಆಧ್ಯಾತ್ಮ ಪ್ರವಚನಗಳಿಂದ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸಿರಿ, ಸಂಪತ್ತು ಸೇರಿದಂತೆ ಭೌತಿಕ ಸಂಪತ್ತಿನಲ್ಲಿ ಸುಖವಿಲ್ಲ.ವೈರಾಗ್ಯದಲ್ಲಿ ಸುಖವಿದೆ.ಭಾರತದಲ್ಲಿ ಆಧ್ಯಾತ್ಮ ಪರಂಪರೆಗೆ ಭವ್ಯ ಇತಿಹಾಸವಿದೆ. ಈಗ ಚಾತುರ್ಮಾಸದಂಗವಾಗಿ ಜನರಲ್ಲಿ ಧರ್ಮ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಧ್ಯಾತ್ಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಷಾಢ ಮಾಸದಲ್ಲಿ ರಾಯಚೂರಿನಲ್ಲಿ ಇಷ್ಟಲಿಂಗ ಪೂಜೆ ಮತ್ತು ಪವಿತ್ರ ಗ್ರಂಥ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಕ ಪ್ರವಚನವನ್ನು ೭ ದಿನಗಳ ಕಾಲ ಸಂಜೆ ೭ ಗಂಟೆಗೆ ಆಯೋಜಿಸಲಾಗಿದೆ. ಸರ್ವರನ್ನು ಸಮಾನತೆಯಿಂದ ನೋಡುವ ಧರ್ಮವೆಂದರೆ ಅದು ವೀರಶೈವ ಲಿಂಗಾಯತ ಧರ್ಮ ಎಂದರು.
ನಮ್ಮ ಧರ್ಮದ ಬಗ್ಗೆ ನಿಷ್ಠೆ ಪರಧರ್ಮದ ಬಗ್ಗೆ ಸಹಿಷ್ಣುತೆ ಬೆಳೆಸಿಕೊಂಡಾಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ. ಜ್ಞಾನವ್ಯಾಪಿ ಮಸೀದಿ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ನ್ಯಾಯಾಲಯದ ಆಚೆ ಮುಸ್ಲೀಂ ಹಾಗೂ ಹಿಂದೂ ಧಾರ್ಮಿಕ ಮುಖಂಡರು ಈ ವಿಷಯವನ್ನು ಬಗೆಹರಿಸಿಕೊಳ್ಳುವುದು ಒಳಿತೆಂದರು.ಬೇಡ ಜಂಗಮ ಮೀಸಲಾತಿ ಅದು ಸಂವಿಧಾನವೇ ಕೊಡಮಾಡಲ್ಪಟ್ಟಿದ್ದು, ಕಾನೂನಾತ್ಮಕವಾಗಿ ಅದನ್ನು ಪಡೆಯುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.
ಶಾಸಕ ಶಿವರಾಜ ಪಾಟೀಲ್ ಮಾತನಾಡಿ,ಜುಲೈ ೧೫ ರಿಂದ ೨೧ರವರೆಗೆ ಇಷ್ಟಲಿಂಗ ಮಹಾಪೂಜೆ ಮತ್ತು ಗ್ರಂಥ ಶ್ರೀ ಸಿದ್ದಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಆಶೀರ್ವಾದ ಕಾರ್ಯಕ್ರಮ ಜರುಗಲಿದ್ದು,ಜಿಲ್ಲೆಯ ಪ್ರತಿಯೊಬ್ಬರು ಬಂದು ಭಾಗವಹಿಸಬೇಕು ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಶ್ರೀ ಷ.ಬ್ರ. ವೀರತಪಸ್ವಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿ, ಶ್ರೀ ಷ.ಬ್ರ. ಡಾ. ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.