ಇಷ್ಟಲಿಂಗಪೂಜೆ ಪ್ರಾತ್ಯಕ್ಷಿಕೆ ತರಬೇತಿ ಶಿಬಿರ


ಸಂಜೆವಾಣಿ ವಾರ್ತೆ
ಸಂಡೂರು : ಜು: 31:  ಜಗತ್ತಿಗೆ ಬಹು ವಿಶೇಷವಾದ ತತ್ವವನ್ನು ನೀಡಿದಂತಹ ಏಕೈಕ ಧರ್ಮ ಎಂದರೆ ಅದು ಲಿಂಗಾಯತ ಧರ್ಮ, 12ನೇ ಶತಮಾನದಲ್ಲಿ ಬಹು ವಿಶೇಷವಾಗಿ ಇಷ್ಟಲಿಂಗಧಾರಣೆಯನ್ನು ಮಾಡಿಕೊಂಡು ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕಾರಣವಾದ ತತ್ವ ಇಷ್ಟಲಿಂಗಪೂಜೆಯಾಗಿದೆ ಎಂದು ಡಾ. ಅಜಯತಾಂಡೂರು, ಮನೋವೈದ್ಯರು ಹೊಸಪೇಟೆ ಇವರು ತಿಳಿಸಿದರು.
ಅವರು ಪಟ್ಟಣದ ವಿರಕ್ತಮಠದಲ್ಲಿ ಅಕ್ಕನಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಇಷ್ಟಲಿಂಗ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿ ನಮಗೆ ಶರಣರು ಇಷ್ಟಲಿಂಗ ನೀಡಿದರು, ಅದರೆ ಅದರ ಪ್ರಯೋಜನ ಮತ್ತು ಅದರ ಸಿದ್ದತೆ , ತಯಾರಿಕೆಯ ಬಗ್ಗೆ ಸರಿಯಾದ ಮಾಹಿತಿಯು ನಮಗೆ ಇಲ್ಲವಾಗಿದೆ, ಅದ್ದರಿಂದ ಇಂದು ಅಕ್ಕನಬಳಗದವರು ಇಂತಹ ಅಭೂತಪೂರ್ವವಾದ ಶಿಬಿರದ ಮೂಲಕ ಇಷ್ಟಲಿಂಗ ಪೂಜಾವಿಧಾನ ಮತ್ತು ಅದರ ಪ್ರಾಮುಖ್ಯತೆಯನ್ನು ತಿಳಿಸುವಂತಹ ಮಹತ್ತರ ಕಾರ್ಯವನ್ನು ಮಾಡಿದ್ದಾರೆ, ಕಾರಣ ಇದರಿಂದ ಸಮಾಜದಲ್ಲಿಯೂ ಸಹ ಅದ್ಬುತವಾದ ಪರಿವರ್ತನೆಯನ್ನು ತರಲು ಇಷ್ಟಲಿಂಗಧಾರಣೆ ಕಾರಣವಾಗುತ್ತದೆ, ಇದು ಯಾವುದೇ ಧರ್ಮ, ಜಾತಿ ಪಂಗಡಕ್ಕೆ ಸೀಮಿತವಾಗದೆ ಯಾರೂ ಒಪ್ಪಿಕೊಂಡು ಧಾರಣೆ ಮಾಡುತ್ತಾರೋ ಅವರೆಲ್ಲರೂ ಲಿಂಗಾಯತ ಧರ್ಮದ ತತ್ವದಲ್ಲಿ ಲಿಂಗಪೂಜೆಯನ್ನು ಸರಳವಾಗಿ ಅನುಸರಿಸಲು ಸಾಧ್ಯವಾಗುತ್ತದೆ ಅದ್ದರಿಂದ ಪ್ರತಿಯೊಬ್ಬರೂ ಸಹ ಇದರ ಮಹತ್ವ ಅರಿತುಕೊಳ್ಳುವುದು ಅತಿ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಹೊಸಪೇಟೆಯ ಶ್ರೀಶಂಕರ್‍ಅನಂದಸಿಂಗ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಬಸವರಾಜ ಅವರು ಮಾತನಾಡಿ ಲಿಂಗಯತರು ಎಂದು ಹೇಳುವ ನಾವು ಇಂದು ಲಿಂಗವನ್ನೇ ಧರಿಸುತ್ತಿಲ್ಲ ಕಾರಣ ಅದರ ಮಹತ್ವ ನಮಗೆ ಇಲ್ಲವಾಗಿದೆ, ಅದ್ದರಿಂದ ಇಂತಹ ಶಿಬಿರದ ಮೂಲಕ ಅದರ ಮಹತ್ವ ತಿಳಿದುಕೊಂಡು ಆಚರಿಸಿದಾಗ ನಮಗೆ ಮಾನಸಿಕ ಮತ್ತು ದೈಹಿಕ ನೆಮ್ಮದಿ ಸಿಗುತ್ತದೆ. ಅಲ್ಲದೆ ವೈಜ್ಞಾನಿಕವಾಗಿಯೂ ಸಹ ಇಷ್ಟಲಿಂಗಪೂಜೆ ಒಂದು ಯೋಗವಾಗಿದೆ, ಕಾರಣ ಪೂಜೆಯ ಸಂದರ್ಭದಲ್ಲಿ ನಾವು ಹೊಂದುವ ಏಕಾಗ್ರತೆ ನಮ್ಮ ಮನಸ್ಸಿನ ಶಾಂತಿಯನ್ನು ಹೆಚ್ಚಿಸುವುದರ ಜೊತೆಗೆ ನಮ್ಮಲ್ಲಿಯ ಅನೇಕ ಮಾನಸಿಕ ಕಾಯಿಲೆಗಳು ದೂರವಾಗುತ್ತವೆ, ಅಲ್ಲದೆ ಕುಟುಂಬದಲ್ಲಿ ಪ್ರತಿಯೊಬ್ಬರೂ ಸಹ ಅನುಸರಿದಾಗ ಕುಟುಂಬ ತುಂಡಾಗುವುದು, ಕೋರ್ಟು ಕಛೇರಿ ಅಲೆಯುವುದು ಇಲ್ಲವಾಗುತ್ತದೆ, ಬಹಳಷ್ಟು ಕಾಯಿಲೆಗಳು ಬರದೇ ನೆಮ್ಮದಿಯ ಬದುಕಿಗೆ ದಾರಿಯಾಗುತ್ತದೆ. ಅದ್ದರಿಂದ ಇಷ್ಟಲಿಂಗಪೂಜೆಯನ್ನು ನಾವು ಏಕಾಗ್ರತೆಯಿಂದ ಮಾಡಬೇಕು, ಅಲ್ಲದೆ ಅದನ್ನು ದೇಹದ ಮೇಲೆ ಧರಿಸುವುದರಿಂದ ಅದರಲ್ಲಿ ಬಳಸಿದ ಅಂಶಗಳು ಸಹ ದೈಹಿಕ ಶಕ್ತಿಗೆ ಮತ್ತು ಚಂಚಲತೆಯಿಂದ ದೂರವಾಗಲು ಕಾರಣವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ವೀರಶೈವಲಿಂಗಾಯತ ಸಮಾಜದ ಹಲವಾರು ಗಣ್ಯರು, ಮಹಿಳೆಯರು ಇದರಲ್ಲಿ ಭಾಗಿಯಾಗಿ ಲಿಂಗಪೂಜೆಯನ್ನು ಮಾಡಿ ಅದರ ಮಹತ್ವ ತಿಳಿದರು.
ವಿರಕ್ತಮಠದ ಪ್ರಭುಮಹಾಸ್ವಾಮಿಗಳು, ಅಕ್ಕನಬಳಗದ ಅಧ್ಯಕ್ಷರಾದ ಗುಡೇಕೋಟೆ ಜ್ಯೋತಿ, ಬಂಡೆಮ್ಯಾಗಳ ಆಶಾವಿರೇಶ್, ಜೆ.ಸಿದ್ದಮ್ಮ, ನಾಗವೇಣಿ, ಉಗ್ರಾಣದ ವಿಶಾಲಾಕ್ಷಮ್ಮ, ಜಿ.ನಳಿನಿ ಪ್ರದೀಪ್ ಕುಮಾರ, ಗಂಗಮ್ಮ, ಅಂಕಮನಾಳ್ ದ್ರಾಕ್ಷ್ಯಣಮ್ಮ, ಜ್ಯೋತಿ ಸರೋಜಮ್ಮ, ಹಗರಿಬಸವರಾಜಪ್ಪ, ನಾಗರಾಜ ನರಸಾಪುರ, ಜ್ಯೋತಿಗೌರಮ್ಮ, ನೀಲಾಂಬಿಕೆ, ಗೋನಾಳ್ ನಿರ್ಮಲ, ಗದಗ ಮಾನ್ವಿಮನೆತನದ ಲತಾ ಮತ್ತು ಕುಟುಂಬದವರು ತಕ್ಕಲಕೋಟೆ ಶಾಂತಮ್ಮ, ಐಕಲ ಸಹನ, ಸುಮಿತ್ರಮ್ಮ ಹೊಳಗುಂದಿ, ಅಲ್ಲದೆ ಹಲವಾರು ಮಹಾನೀಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.