ಇಷ್ಟಲಿಂಗಪೂಜೆ ಧರ್ಮಜಾಗೃತಿ ಕಾರ್ಯಕ್ರಮ ಸದುಪಯೋಗ ಪಡೆದುಕೊಳ್ಳಿ: ರಂಭಾಪುರಿ ಶ್ರೀಗಳು

ಬೀದರ:ಜು.25: ಬೀದರ ಜಿಲ್ಲೆ ಭಕ್ತಿ ಶೃದ್ಧೆ ಮತ್ತು ಅಭಿಮಾನಕ್ಕೆ ಹೆಸರುವಾಸಿ. ಹೀಗಾಗಿ ಬೀದರ ಜಿಲ್ಲೆಯ ಕೊಳಾರ ಕೆ. ಪರಿಸರದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮ ಸ್ಥಾಪನೆ ಮಾಡಲಾಗಿದೆ. ತನ್ಮೂಲಕ ಈ ಭಾಗದಲ್ಲಿ ವೀರಶೈವ ಧರ್ಮ ಸಂಸ್ಕøತಿ, ಗುರುಪರಂಪರೆಯ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಸೇವಾ ಕೈಂಕರ್ಯ ಇಲ್ಲಿ ನಡೆಯುತ್ತಿದೆ. ತನ್ನಿಮಿತ್ತ ಜುಲೈ 25 ರಿಂದ 27ರ ವರೆಗೆ ನೌಬಾದ ಸಮೀಪದ ಭಾಲ್ಕಿ ರಸ್ತೆಯಲ್ಲಿರುವ ಕೊಳಾರ ಕೆ. ಪರಿಸರದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರ ಪುಣ್ಯಾಶ್ರಮದಲ್ಲಿ ಇಷ್ಟಲಿಂಗ ಮಹಾಪೂಜೆ, ಧರ್ಮಜಾಗೃತಿ ಸಭೆÉ, ಪ್ರವಚನ ಮತ್ತು ಅಯ್ಯಾಚಾರ ಕೊನೆಯ ದಿವಸ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ವೀರಸಿಂಹಾಸನಾಧೀಶ್ವರ 1008 ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಕರು ತಿಳಿಸಿದರು.

ಕೊಳಾರ ಕೆ. ಪರಿಸರದಲ್ಲಿ ನಿರ್ಮಿಸಲಾದ ಭವ್ಯ ಪುಣ್ಯಾಶ್ರಮಕ್ಕೆ ಜುಲೈ 25 ರಿಂದ 27ರ ವರೆಗೆ ಮೂರು ದಿವಸಗಳ ಕಾಲ ನಡೆಯಲಿರುವ ಭವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೋಮವಾರ ರಾತ್ರಿಯೇ ಆಗಮಿಸಿದ ಪೂಜ್ಯ ರಂಭಾಪುರಿ ಶ್ರೀಗಳು ಮಾತನಾಡಿದರು. ಪೂಜ್ಯರನ್ನು ಹಾಲಹಳ್ಳಿ ಸಮೀಪದ ಖಾಸಗಿ ಹೊಟೇಲ್‍ನಿಂದ ಭವ್ಯ ಸ್ವಾಗತವನ್ನು ಭಕ್ತಾದಿಗಳು ಕೋರಿದರು. ಪುಣ್ಯಾಶ್ರಮದಲ್ಲಿ ಸುದ್ದಿಸಮಯದೊಂದಿಗೆ ಮಾತನಾಡಿದ ಪೂಜ್ಯ ಶ್ರೀಗಳು “ಮೂರು ದಿವಸಗಳ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಪಾಲ್ಗೊಂಡು ಪುನೀತರಾಗಬೇಕು. ಇಲ್ಲಿ ಭದ್ರಕಾಳಿ, ವೀರಭದ್ರೇಶ್ವರ ಹಾಗೂ ವಿಶ್ವವಿಭು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ವೇದಮೂರ್ತಿ ಷಣ್ಮುಖಯ್ಯ ಸ್ವಾಮಿಯವರ ತನು ಮನ ಧನದ ಸೇವೆಯಿಂದ ಮುಂದಿನ ದಿನಗಳಲ್ಲಿ ಈ ಪಂಚಾಚಾರ್ಯ ಪುಣ್ಯಾಶ್ರಮ ಈ ಭಾಗದ ಬಹುದೊಡ್ಡ ಪುಣ್ಯಾಶ್ರಮವಾಗಿ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಭೌತಿಕವಾಗಿ ಮನುಷ್ಯ ಬಳಲಿ ಬೆಂಡಾಗಿ ಬೇಸತ್ತು ಬಂದಾಗ ಇಂತಹ ಪುಣ್ಯಶ್ರಮಕ್ಕೆ ಬರಬೇಕು. ಇಲ್ಲಿ ಅವರ್ಣನೀಯವಾದ ಶಾಂತಿ ಸಮಾಧಾನ ಲಭಿಸುತ್ತದೆ ಎಂದರಲ್ಲದೆ ಮೂರು ದಿವಸಗಳ ಕಾಲ ಮಂದಿರ ಉದ್ಘಾಟನೆ, ಧರ್ಮಸಭೆ, ಪ್ರವಚನ ನಡೆಯುತ್ತಿದೆ. ಭಕ್ತಾದಿಗಳು ಆಗಮಿಸಿ ಜಗದ್ಗುರುಗಳವರ, ರೇಣುಕಾಚಾರ್ಯರ, ಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಪೂಜ್ಯ ಶ್ರೀ ರಂಭಾಪುರಿ ಶ್ರೀಗಳು ತಿಳಿಸಿದರು.