ಇಷ್ಟರತನಕ ಸಿರಿಬಾಗಿಲು ಗ್ರಾಮದಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ

ಕಡಬ, ಜೂ.೧೦- ಕೊರೋನಾ ಎರಡನೇ ಅಲೆಯು ಇಡೀ ಪ್ರಪಂಚವನ್ನು ತಲ್ಲಣಗೊಳಿಸಿದರೂ ೧೬೫ ಕುಟುಂಬಗಳು ಮತ್ತು ಸುಮಾರು ೮೭೨ ಜನಸಂಖ್ಯೆ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿಗೆ ಒಳಪಡುವ ಪ್ರಾಕೃತಿಕ ಸೌಂದರ್ಯ ಹೊಂದಿರುವ ಸಿರಿಬಾಗಿಲು ಗ್ರಾಮದಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ.


ಕಡಬ ತಾಲೂಕಿನ ೪೨ ಗ್ರಾಮಗಳ ಪೈಕಿ ಕೊಂಬಾರು ಗ್ರಾಮ ಪಂಚಾಯಿತಿಗೆ ಒಳಪಡುವ ಸುಮಾರು ೭೫೬೧ಎಕ್ರೆ ವಿಸ್ತೀರ್ಣ ಹೊಂದಿರುವ ಸಿರಿಬಾಗಿಲು ಗ್ರಾಮದಲ್ಲಿ ಇದುವರೆಗೆ ಕೊರೋನಾ ಪ್ರಕರಣಗಳು ಕಂಡುಬಂದಿಲ್ಲ. ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ ಎಂದ ಮಾತ್ರಕ್ಕೆ ಈ ಗ್ರಾಮದ ಜನತೆ ಹೊರಗಡೆ ಪಟ್ಟಣಗಳನ್ನು ಆಶ್ರಯಿಸಿಲ್ಲ ಎಂದು ಅರ್ಥವಲ್ಲ. ಇವರು ತಮ್ಮ ದೈನಂದಿನ ಅಗತ್ಯಗಳಿಗೆ, ಆಸ್ಪತ್ರೆಯ ಅಗತ್ಯಗಳಿಗೆ ಆಶ್ರಯಿಸಿರುವುದು ಕೊರೊನಾ ಪಾಸಿಟಿವ್ ಪ್ರಕರಣಗಳು ಇರುವ ಪಟ್ಟಣ ಪ್ರದೇಶಗಳನ್ನೇ.ಮಾತ್ರವಲ್ಲದೆ ತಮ್ಮ ಗ್ರಾಮದ ಪಂಚಾಯತ್ ಇರುವ ಪಕ್ಕದ ಕೊಂಬಾರು ಗ್ರಾಮದಲ್ಲೂ ಹಲವರಿಗೆ ಕೊರೊನಾ ಸೋಂಕು ತಗುಲಿದೆ. ಇದಕ್ಕೆ ಕಾರಣವೇನು ಎಂದು ಹುಡುಕಲು ಹೊರಟಾಗ ನಮಗೆ ತಿಳಿಯುವುದು ಈ ಗ್ರಾಮದ ಜನರ ಮುನ್ನೆಚ್ಚರಿಕೆಯುಕ್ತ ಜೀವನ ಶೈಲಿ ಹಾಗೂ ಸ್ಥಳೀಯ ಕೊರೊನಾ ವಾರಿಯರ್ಸ್ ಗಳ ಸಮಯೋಚಿತವಾದ ನಿಲುವು ಎಂಬುದು.ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರ ಪರ್ವತದ ಸಹ್ಯಾದ್ರಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ಗ್ರಾಮ ಪ್ರಾಕೃತಿಕ ಸೌಂದರ್ಯದ ಜೊತೆಗೆ ಹಲವಾರು ಬಗೆಯ ಸಸ್ಯ ಸಂಪತ್ತನ್ನು ಹೊಂದಿದೆ. ಒಟ್ಟಿನಲ್ಲಿ ಈ ಗ್ರಾಮದ ಜನತೆಯ ಜೀವನಶೈಲಿಯನ್ನು ಇತರ ಗ್ರಾಮಗಳ ಹಾಗೂ ದೇಶದ ಜನತೆ ಪಾಲಿಸುವಂತಾಗಲಿ ಹಾಗೂ ಮುಂದಿನ ದಿನಗಳಲ್ಲೂ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಈ ಗ್ರಾಮಕ್ಕೆ ಬಾರದಿರಲಿ ಎಂಬುದೇ ನಮ್ಮ ಆಶಯ.