ಇಷ್ಟಪಟ್ಟು ಓದಿ, ಪುನರಾವಲೋಕನಕ್ಕೆ ಒತ್ತು ನೀಡಿ:ಡಾ.ನಾ.ಸೋಮೇಶ್ವರ

ಕಲಬುರಗಿ:ಜು.22: ಕಷ್ಟಪಟ್ಟು ಓದುವುದಕ್ಕಿಂತಲೂ ಇಷ್ಟಪಟ್ಟು ಓದುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳುವುದರಿಂದ ಓದಿದ್ದು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದು ಖ್ಯಾತ ವೈದ್ಯ ಸಾಹಿತಿ ಹಾಗೂ ದೂರದರ್ಶನದ ‘ಥಟ್ ಅಂತ ಹೇಳಿ’ ಸರಣಿ ಕಾರ್ಯಕ್ರಮದ ಖ್ಯಾತ ನಿರೂಪಕ ಡಾ.ನಾ.ಸೋಮೇಶ್ವರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ವಿವೇಕಾನಂದ ವಿದ್ಯಾ ನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಾ.ಸಾ.ಜ.ನಾಗಲೋಟಿಮಠ ಇಂಟರ್ ನ್ಯಾಷನಲ್ ಫೌಂಡೇಷನ್ ಹಾಗೂ ವಿವೇಕಾನಂದ ವಿದ್ಯಾ ನಿಕೇತನದ ಜಂಟಿ ಆಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ‘ಕಲಿಕೆ, ಓದು ಮತ್ತು ನೆನಪು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಷ್ಟಪಟ್ಟು ಓದಿದ್ದನ್ನು ಮೇಲಿಂದ ಮೇಲೆ ಬರೆಯುತ್ತಾ, ಆಗಾಗ ಪುನರಾವಲೋಕನ (ರಿವ್ಯೂ) ಮಾಡುತ್ತಾ ಹೋದರೆ ಪ್ರತಿ ವಿಷಯದಲ್ಲಿಯೂ ಪ್ರತಿ ವಿದ್ಯಾರ್ಥಿ ಓರ್ವ ಮಾಸ್ಟರ್ (ನಿಪುಣ) ಆಗಿ ಹೊರಹೊಮ್ಮಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

ಕಲಿಕೆ ಮತ್ತು ನೆನಪಿನ ಶಕ್ತಿ ವೃದ್ಧಿ ಕುರಿತು ನಾಲ್ಕು ಸತ್ಯಗಳನ್ನು ವಿದ್ಯಾರ್ಥಿಗಳು ನೆನಪಿಟ್ಟುಕೊಳ್ಳಲು ಅನುಕೂಲವಾಗುವಂತೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮನದಟ್ಟು ಮಾಡಿಸಿದ ಡಾ.ಸೋಮೇಶ್ವರ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಲೇ ಮೆದುಳಿಗೆ ಸಂಬಂಧಿಸಿದ ಕುತೂಹಲಕಾರಿ ಅಂಶಗಳನ್ನು ವಿದ್ಯಾರ್ಥಿಗಳ ಎದುರು ತೆರೆದಿಟ್ಟರು. ಮನೆಯ ಪರಿಸರ, ಶಾಲೆಯ ಪರಿಸರ ಮತ್ತು ಸಹವಾಸದ ಪರಿಸರ (ಸ್ನೇಹಿತರು) ನಮ್ಮ ಕಲಿಕೆ ಹಾಗೂ ಗ್ರಹಿಕೆಯ ಶಕ್ತಿಯನ್ನು ನಿರ್ಧರಿಸುತ್ತದೆ. ಮನೆಯ ಚೇತೋಹಾರಿ ಹಾಗೂ ನಿರಾಶದಾಯಕ ವಾತಾವರಣ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ, ಮನೆಯ ಎಲ್ಲ ಸದಸ್ಯರ ಸದಭಿರುಚಿ ಮಕ್ಕಳ ಆಸಕ್ತಿಯನ್ನು ಕೆರಳಿಸುತ್ತದೆ. ಜೊತೆಗೆ, ಶಾಲೆಯಲ್ಲಿ ಕೈಗೊಳ್ಳಬಹುದಾದ ಒಲಂಪಿಯಾಡ್ ಸ್ಪರ್ಧೆಗಳಿಂದಾಗಿ ಪ್ರತಿ ವಿಷಯದ (ಸಬ್ಜೆಕ್ಟ್) ಮೇಲೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬಹುದಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕಾಗುತ್ತದೆ ಎಂದು ಆಪ್ತ ಸಲಹೆ ನೀಡಿದರು.

ತನಗೆ ಹಿತವಾದದ್ದನ್ನು ಮಾತ್ರ ಗ್ರಹಿಸುವುದು ಮೆದುಳಿನ ಹುಟ್ಟು ಗುಣವಾಗಿದ್ದು, ಶಾಲೆಯಲ್ಲಿ ಬೋಧಿಸುವ ಪ್ರತಿ ಪಾಠವನ್ನು ಸಣ್ಣ ಸಣ್ಣ ಅಂಶಗಳಲ್ಲಿ ವಿಂಗಡಿಸಿಕೊಂಡು ಪಾಯಿಂಟ್ಸ್ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಸಬ್ಜೆಕ್ಟ್ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ಪರೀಕ್ಷೆಯ ದೃಷ್ಟಿಯಿಂದ ಅಂಕಗಳಿಗಾಗಿ ಓದುವುದು ಇಂದಿನ ಅನಿವಾರ್ಯ ಎನ್ನುವುದು ನಿಜವಾದರೂ, ಓದಿದ ವಿಷಯದ ಕುರಿತು ಬಳಿಕ ಪೂರ್ಣ ಮಾಹಿತಿ ಸಂಗ್ರಹಿಸುವುದನ್ನು ಮರೆಯಬಾರದು ಎಂದರು.

ಕಲಿಕೆ ಮತ್ತು ನೆನಪಿಗೆ ಶಾರ್ಟ್‍ಕಟ್ ತಂತ್ರ ಎಂಬುದಿಲ್ಲ. ಅಂದು ಕಲಿತ ವಿಷಯವನ್ನು ಅದೇ ದಿನ ಓದಿ ಮುಗಿಸುವುದು ನೈಜ ಬುದ್ಧಿವಂತಿಕೆ. ಆದಷ್ಟೂ ಪ್ರತಿ ಪಾಠಕ್ಕೆ ಅನುಗುಣವಾಗಿ ಕ್ವಶ್ಚನ್ ಬ್ಯಾಂಕ್ ಸಿದ್ಧಪಡಿಸಿಕೊಂಡು, ಅದರನುಸಾರ ಓದುವುದರಿಂದ ಹೆಚ್ಚು ಅಂಕಗಳನ್ನು ಸುಲಭವಾಗಿ ಪಡೆಯಬಹುದು ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಿದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಡಾ.ಸೋಮೇಶ್ವರ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಔಷಧ ತಜ್ಞರಾದ ಬಿ.ಎಸ್.ದೇಸಾಯಿ ಹಾಗೂ ಹಿರಿಯ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಹಿರಿಯ ಪ್ರಾಧ್ಯಾಪಕ ಡಾ.ಶಶಿಶೇಖರರೆಡ್ಡಿ, ನಿವೃತ್ತ ಕನ್ನಡ ಪ್ರಾಧ್ಯಾಪಕಿ ಮಹಾನಂದ ದಿಗ್ಗಾಂವಕರ್, ವಿವೇಕಾನಂದ ವಿದ್ಯಾ ನಿಕೇತನದ ಪ್ರಾಂಶುಪಾಲರಾದ ಸಿದ್ದಪ್ಪ ಭಗವತಿ, ವಿವೇಕಾನಂದ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷೆ ಸುವರ್ಣಾ ಭಗವತಿ, ಉಪಪ್ರಾಂಶುಪಾಲ ಪ್ರಸಾದ್ ವೇದಿಕೆಯಲ್ಲಿದ್ದರು.


ಖಾಲಿ ಹೊಟ್ಟೆಯ ‘ಮುಂಜಾನೆ’ ನಿಷಿದ್ಧ

ವಿದ್ಯಾರ್ಥಿಗಳು ಬೆಳಗ್ಗೆ ಶಾಲೆಗೆ ಬರುವಾಗ ಯಾವುದೇ ಕಾರಣಕ್ಕೂ ಖಾಲಿ ಹೊಟ್ಟೆಯಲ್ಲಿ ಬರಬಾರದು. ಇದರಿಂದ ಮಕ್ಕಳ ರಕ್ತದಲ್ಲಿ ಹೀಮೋಗ್ಲೋಬಿನ್ ಮಟ್ಟ ಕುಸಿತಗೊಳ್ಳುವ ಸಾಧ್ಯತೆಯಿರುತ್ತದೆ. ಆಮ್ಲಜನಕವನ್ನು ದೇಹದ ಎಲ್ಲ ಭಾಗಗಳಿಗೆ ಹೊತ್ತೊಯ್ಯುವ ಹೀಮೋಗ್ಲೋಬಿನ್ ಕುಸಿತದಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ, ಈ ನಿಟ್ಟಿನಲ್ಲಿ ಆಗಾಗ ಮಕ್ಕಳ ಹೀಮೋಗ್ಲೋಬಿನ್ ಮಟ್ಟ ಪರೀಕ್ಷಿಸಿ, ಅಗತ್ಯ ಆಹಾರ ಮತ್ತು ಚಿಕಿತ್ಸೆ ನೀಡುವುದು ಒಳ್ಳೆಯದು ಎಂದು ಡಾ.ನಾ.ಸೋಮೇಶ್ವರ ಕಿವಿಮಾತು ಹೇಳಿದರು.