
ಬೆಂಗಳೂರು,ಅ.೨-ಟೆಸ್ಟ್ ಡ್ರೈವ್ ತೆಗೆದುಕೊಂಡ ವಿದ್ಯುತ್ ಚಾಲಿತ(ಇವಿ) ಸ್ಕೂಟರ್ ನ್ನು ಅತಿ ವೇಗವಾಗಿ ಚಲಾಯಿಸಿಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಮರಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿರುವ ದಾರುಣ ಘಟನೆ ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಿಇಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಧ್ಯಾನ್ ಶ್ರೇಯಸ್(೨೦) ಮೃತಪಟ್ಟವರು, ಡಿಕ್ಕಿಯ ರಭಸಕ್ಕೆ ಮರವೇ ತುಂಡಾಗಿ ಸ್ಕೂಟರ್ ಸಂಪೂರ್ಣ ಜಖಂಗೊಂಡಿದೆ.ನಾಗರಬಾವಿಯ ಧ್ಯಾನ್ ಶ್ರೇಯಸ್ ನಿನ್ನೆ ಮಧ್ಯಾಹ್ನ ೨.೩೦ರ ವೇಳೆ ದೊಮ್ಮಲೂರಿನ ಅಲ್ಟ್ರಾ ವೈಲೆಂಟ್ ಕಂಪನಿಯ ಶೋ ರೂಂ ನಲ್ಲಿ ಅದೇ ಕಂಪನಿಯ ವಿದ್ಯುತ್ ಚಾಲಿತ(ಇವಿ) ಸ್ಕೂಟರ್ ನ್ನು ಟೆಸ್ಟ್ ಡ್ರೈವ್ ತೆಗೆದುಕೊಂಡು ಹೊರಟಿದ್ದರು.
ಕೋರಮಂಗಲ ದೊಮ್ಮಲೂರಿನ ಮಾರ್ಗದ ಒಳ ವರ್ತುಲ ರಸ್ತೆಯ ದಿನ್ನೆ ಬಳಿಯ ದೊಡ್ಡದಾದ ತಿರುವಿನಲ್ಲಿ ವೇಗವಾಗಿ ಸ್ಕೂಟರ್ ಚಲಾಯಿಸಿ ಮೂದಲು ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಮರಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಹಲಸೂರು ಸಂಚಾರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.