
ಪಟ್ಟಾಯ (ಥೈಲ್ಯಾಂಡ್), ಜು.೧೦- ಪ್ಯಾಸೆಂಜರ್ ವಾಹನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಜಪಾನ್ ಗುರುತಿಸಿಕೊಂಡಿದ್ದು, ಎಲ್ಲೆಡೆ ತನ್ನ ಅಬ್ಬರ ಹೊಂದಿದೆ. ಆದರೆ ಇತ್ತೀಚಿಗಿನ ವರ್ಷಗಳಲ್ಲಿ ಎಲೆಕ್ಟ್ರಾನಿಕ್ ವಾಹನಗಳ (ಇವಿ) ಕ್ಷೇತ್ರದಲ್ಲಿ ಚೀನಾ ತನ್ನ ಅಬ್ಬರ ಮುಂದುವರೆಸಿದ್ದು, ಅದರಲ್ಲೂ ಥೈಲ್ಯಾಂಡ್‌ನಲ್ಲಿ ಜಪಾನ್ ವಿರುದ್ಧ ನಿಧಾನವಾಗಿ ಮೇಲುಗೈ ಸಾಧಿಸುತ್ತಿದೆ.
ಒಂದು ಕಾಲದಲ್ಲಿ ಥಾಯ್ಲೆಂಡ್‌ನ ಸಿಯಾಮ್ ಮೋಟಾರ್ಸ್ ೧೯೬೨ ರಲ್ಲಿ ಜಪಾನ್‌ನ ನಿಸ್ಸಾನ್ ಮೋಟಾರ್ಸ್ ಜೊತೆಗೆ ದಿನಕ್ಕೆ ನಾಲ್ಕು ಕಾರುಗಳನ್ನು ಹೊರತರುವ ನಿಟ್ಟಿನಲ್ಲಿ ಬಹುದೊಡ್ಟ ಪಾಲುದಾರಿಕೆಯ ಕಾರ್ಖಾನೆ ಸ್ಥಾಪಿಸಿತ್ತು. ಇದರಿಂದ ಇದು ಜಪಾನೀಸ್ ಕಂಪನಿಗಳೊಂದಿಗೆ ಲಾಭದಾಯಕ, ದಶಕಗಳ-ದೀರ್ಘ ಸಂಬಂಧಕ್ಕೆ ಕಾರಣವಾಗಿ, ನಿಧಾನವಾಗಿ ಕಾರ್ ಡೀಲರ್‌ನಿಂದ ವಾಹನ ಪ್ರವರ್ತಕನಾಗಿ ಮುನ್ನಡೆಯಿತು. ಸದ್ಯ ವಾರ್ಷಿಕ ೭ ಶತಕೋಟಿ ಡಾಲರ್ ಆದಾಯ ಲಾಭ ಪಡೆಯುತ್ತಿರುವ ಸಿಯಾಮ್ ಮೋಟಾರ್ಸ್ ಇದೀಗ ಜಪಾನ್‌ನ ಕಂಪೆನಿಯಿಂದ ತನ್ನ ಸಂಬಂಧ ಕಳೆದುಕೊಳ್ಳಲು ನೋಡುತ್ತಿದೆ ಎನ್ನಲಾಗಿದೆ. ಪರಿಣಾಮ ವಿಶೇಷವಾಗಿ ಉನ್ನತ-ಮಟ್ಟದ ಎಲೆಕ್ಟ್ರಾನಿಕ್ ವಾಹನಗಳ ಕ್ಷೇತ್ರ ಸೇರಿದಂತೆ ಸಂಭಾವ್ಯ ಪಾಲುದಾರಿಕೆಗಳ ಬಗ್ಗೆ ಹಲವಾರು ಚೀನೀ ವಾಹನ ತಯಾರಕರೊಂದಿಗೆ ಸದ್ಯ ಸಿಯಾಮ್ ಮೋಟಾರ್ಸ್ ಮಾತುಕತೆಯಲ್ಲಿ ತೊಡಗಿಕೊಂಡಿದೆ ಎನ್ನಲಾಗಿದೆ. ಚೀನಾದ ಬಿವೈಡಿ ಕಂಪೆನಿಯು ಥೈಲ್ಯಾಂಡ್‌ನ ಇವಿ ಮಾರುಕಟ್ಟೆಯ ಸ್ವರೂಪವನ್ನೇ ಬದಲಾಯಿಸುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಮೂಲಕ ಜಪಾನ್‌ಗೆ ಹಿನ್ನಡೆ ತರುತ್ತಿದೆ ಎನ್ನಲಾಗಿದೆ. ಎಲೆಕ್ಟ್ರಾನಿಕ್ಸ್ ವಾಹನಗಳ ಬೆಳವಣಿಗೆಯ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ. ಈ ಕ್ಷೇತ್ರದಲ್ಲಿ ಅಪಾರ ಮಟ್ಟದಲ್ಲಿ ಮಾರುಕಟ್ಟೆ ಬೆಳೆಯುತ್ತಿದ್ದು, ನಾವು ಬೆಳವಣಿಗೆಯನ್ನು ಹಿಡಿಯಲು ಬಯಸುತ್ತೇವೆ ಎಂದು ಸಿಯಾಮ್ ಮೋಟಾರ್ಸ್‌ನ ಉಪಾಧ್ಯಕ್ಷ ಸೆಬಾಸ್ಟಿಯನ್ ಡುಪುಯ್ ಅವರು ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದು, ಸದ್ಯದ ಬೆಳವಣಿಗೆಗೆ ಕನ್ನಡಿ ಹಿಡಿದಂತಿದೆ. ಅದರಲ್ಲೂ ಇತ್ತೀಚಿಗಿನ ವರ್ಷಗಳಲ್ಲಿ ಥೈಲ್ಯಾಂಡ್‌ನಲ್ಲಿ ಚೀನಾದ ಹೂಡಿಕೆಗಳ ಪ್ರಮಾಣ ಹೆಚ್ಚಿನ ಮಟ್ಟದಲ್ಲಿ ಏರಿಕೆಯಾಗಿದೆ. ೨೦೨೦ರ ಬಳಿಕ ಇಲ್ಲಿ ೧.೪ ಶತಕೋಟಿ ಡಾಲರ್ ಮೊತ್ತವನ್ನು ಚೀನಾ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿಕೆ ಮಾಡಿದ್ದು, ಜಪಾನ್ ಮೇಲಗೈ ಸಾಧಿಸಿರುವ ಕ್ಷೇತ್ರಗಳಲ್ಲಿ ಕೂಡ ಇದೀಗ ತನ್ನ ಅಬ್ಬರತೆ ಪ್ರದರ್ಶಿಸುತ್ತಿದೆ. ಆಗ್ನೇಯ ಏಷ್ಯಾದಲ್ಲಿ ಥೈಲ್ಯಾಂಡ್ ಅತಿದೊಡ್ಡ ಕಾರು ಉತ್ಪಾದಕ ಮತ್ತು ರಫ್ತುದಾರನಾಗಿದ್ದು, ಇಂಡೋನೇಷ್ಯಾದ ನಂತರ ಅದರ ಎರಡನೇ ಅತಿದೊಡ್ಡ ಮಾರಾಟ ಮಾರುಕಟ್ಟೆಯಾಗಿದೆ. ಕಳೆದ ಹಲವು ವರ್ಷಗಳಲ್ಲಿ ಜಪಾನ್‌ನ ಹಲವು ವಾಹನ ತಯಾರಕ ಕಂಪೆನಿಗಳು ಇಲ್ಲಿ ಹೆಚ್ಚಿನ ಹೂಡಿಕೆ ಮಾಡಿತ್ತು. ಆದೆರ ಚೀನಾ ಕಳೆದ ವರ್ಷ ಥೈಲ್ಯಾಂಡ್‌ನ ಅಗ್ರ ವಿದೇಶಿ ಹೂಡಿಕೆದಾರರಾಗಿ ಜಪಾನ್ ಅನ್ನು ಮೀರಿಸಿದೆ.