
ಭಾಲ್ಕಿ:ಮಾ.11: ಇಲ್ಲಿಯ ತಹಸೀಲ್ ಕಚೇರಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಕೆ ಹಾಗೂ ಮತದಾನ ಖಾತ್ರಿ ಯಂತ್ರ (ವಿ.ವಿ. ಪ್ಯಾಟ್) ಕಾರ್ಯವೈಖರಿ ಕುರಿತಂತೆ ಪ್ರಾತ್ಯಕ್ಷತೆ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ ಮುಖಂಡ ಪ್ರಕಾಶ ಮಾಶೆಟ್ಟೆ ಮಾತನಾಡಿ, ವಿದ್ಯುನ್ಮಾನ ಮತ ಯಂತ್ರಗಳು ಹೇಗೆ ಕಾರ್ಯನಿರ್ವಹಿಸುತ್ತವೆ. ಮತ್ತು ಅವುಗಳ ಮೂಲಕ ಸಾರ್ವಜನಿಕರು ಹೇಗೆ ಮತ ಚಲಾವಣೆ ಮಾಡಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಯುವಕರು, ಸಾರ್ವಜನಿಕರು ಸದುಪಯೋಗ ಪಡೆದು ಕೊಳ್ಳಬೇಕು ಎಂದರು.
ಶಶಿಧರ ಕೋಸಂಬೆ ಮಾತನಾಡಿ, ಮತದಾರರಿಗೆ ವಿದ್ಯುನ್ಮಾನ ಮತಯಂತ್ರ ಬಳಕೆ ಹಾಗೂ ಮತದಾನ ಖಾತ್ರಿ ಕುರಿತಂತೆ ಜಾಗೃತಿ ಮೂಡಿಸಲಾಗುತ್ತಿದ್ದು, ಅಧಿಕಾರಿಗಳು ವಿವಿ ಪ್ಯಾಟ್ ಬಳಕೆ ಬಗ್ಗೆ ಪ್ರಾತ್ಯಕ್ಷತೆ ಮೂಲಕ ಚುನಾವಣಾ ಪ್ರಕ್ರಿಯೆ ವಿಷಯದಲ್ಲಿ ವಿಶ್ವಾಸ ಮೂಡಿಸಲು ಅರಿವು ಮೂಡಿಸುತ್ತಿದ್ದಾರೆ.
ಈ ಪ್ರಾತ್ಯಕ್ಷಿಯಲ್ಲಿ ಮತದಾರರು ಪಾಲ್ಗೊಂಡು ಅಣಕು ಮತದಾನ ಮಾಡಿ, ಇವಿಎಂ ಯಂತ್ರದಲ್ಲಿ ಮತ ಚಲಾಯಿಸುವ ಹಾಗೂ ಮತದಾನ ಖಾತ್ರಿ ಮಾಡಿಕೊಳ್ಳುವ ಬಗ್ಗೆ ಖುದ್ದು ಮನವರಿಕೆ ಮಾಡಿಕೊಳ್ಳಬಹುದಾಗಿದೆ. ಈ ಪ್ರಾತ್ಯಕ್ಷತೆ ಯುವ ಮತದಾರರಿಗೆ ಹಾಗೂ ಮೊದಲ ಬಾರಿಗೆ ಮತದಾನ ಮಾಡುವಂತಹವರಿಗೂ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕರವೇ ಅಧ್ಯಕ್ಷ ಸಂಗಮೇಶ ಗುಮ್ಮೆ, ವಕೀಲ ನೀಲಕಂಠ ಬಿರಾದಾರ್ ಸೇರಿದಂತೆ ತಹಸೀಲ್ ಕಚೇರಿಯ ಅಧಿಕಾರಿಗಳು ಇದ್ದರು.