ಇವಿಎಂ ಬಳಕೆ ಕೈಬಿಡಲು ಒತ್ತಾಯ

ಮೈಸೂರು,ನ.17:- ಸ್ಥಳೀಯ ಚುನಾವಣೆಗಳಲ್ಲಿ ಇವಿಎಂ ಬಳಕೆ ಕೈಬಿಟ್ಟು ಬ್ಯಾಲೆಟ್ ಮೂಲಕ ಚುನಾವಣೆ ನಡೆಸಲು ಚುನಾವಣಾ ಆಯೋಗ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಅವರು, ಈಚೆಗೆ ನಡೆದಿರುವ ಚುನಾವಣೆಗಳಲ್ಲಿ ಇವಿಎಂ ಯಂತ್ರಗಳ ಮೂಲಕ ನಡೆಸಿರುವ ಚುನಾವಣೆ ಮತ ಎಣಿಕೆ ಕಾರ್ಯದಲ್ಲಿ ಮತಗಟ್ಟೆಗಳಲ್ಲಿ ಮತದಾನವಾಗಿರುವ ಮತಗಳಿಗಿಂತ ಹೆಚ್ಚಿನ ಮತಗಳು ಚಲಾವಣೆಯಾಗುತ್ತಿರುವುದು ಕಂಡು ಬರುತ್ತಿದ್ದು ಪಾರದರ್ಶಕವಾದ ಚುನಾವಣೆಗಳು ನಡೆಯುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಈಗಾಗಲೇ ಇಂಗ್ಲೆಂಡ್ , ಜರ್ಮನಿ, ನೆದರ್ ಲ್ಯಾಂಡ್ಸ್, ಫ್ರಾನ್ಸ್, ಇಟಲಿ ,ಸೇರಿದಂತೆ ಅನೇಕ ದೇಶಗಳಲ್ಲೂ ಇವಿಎಂ ಬಗ್ಗೆ ಅನುಮಾನವಿದೆ. ಹಾಗಾಗಿ ಅಲ್ಲೂ ಈಗಲೂ ಕೂಡ ಬ್ಯಾಲೆಟ್ ಪೇಪರ್ ಉಪಯೋಗಿಸಲಾಗುತ್ತಿದೆ. ಚುನಾವಣಾ ಆಯೋಗ ಅಲ್ಲಿನ ಹಾಗೆ ಭಾರತದಲ್ಲೂ ಸಹ ಹಿಂದೆ ಇದ್ದಂತಹ ಬ್ಯಾಲೆಟ್ ಪೇಪರ್ ತರಬೇಕು, ಈ ಬಗ್ಗೆ ಚುನಾವಣಾ ಆಯೋಗದಿಂದಲೂ ಉತ್ತರ ಸಿಗುತ್ತಿಲ್ಲ. ಕೇಂದ್ರ ಸರ್ಕಾರವೂ ನಿಖರವಾದ ಉತ್ತರ ನೀಡುತ್ತಿಲ್ಲ. ಇದರಿಂದ ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿರುವುದು ಅನುಮಾನ ಮೂಡಿಸುವಂತಿದ್ದು, ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಪುರಸಭೆ, ನಗರಸಭೆ, ವಿಧಾನಸಭಾ ಚುನಾವಣೆಗಳಲ್ಲಿ ಇವಿಎಂ ಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಪ್ರಕ್ರಿಯೆ ನಡೆಸಬೇಕು ಎಂದಿದ್ದಾರೆ. ಈಗಾಗಲೇ ಸಾಕಷ್ಟು ರಾಜಕೀಯ ಪಕ್ಷಗಳು ಈ ಬಗ್ಗೆ ಚುನಾವಣೆ ಆಯೋಗಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.