ಇವಿಎಂ ಕುರಿತು ಮತದಾರರಿಗೆ ಜಾಗೃತಿ

ಮಾಲೂರು, ಮಾ. ೧೦- ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಚುನಾವಣೆ ಶಾಖೆ ವತಿಯಿಂದ ವಿದ್ಯುನ್ಮಾನ ಮತಯಂತ್ರದ ಮೂಲಕ ಮತ ಚಲಾವಣೆ ಮಾಡುವ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುನ್ಮಾನ ಮತ ಯಂತ್ರದ ಪ್ರಾತ್ಯಕ್ಷಿಕತೆ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶಿರಸ್ತೆದಾರ್ ಭಾಸ್ಕರ್ ಹೇಳಿದರು.
ಪಟ್ಟಣದ ಮಿನಿ ವಿಧಾನ ಸೌದ ಚುನಾವಣೆ ಶಾಖೆ ಮುಂಭಾಗ ವಿದ್ಯುನ್ಮಾನ ಮತ ಯಂತ್ರ ಪ್ರಾತ್ಯಕ್ಷಿಕತೆಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುವ ಹಿನ್ನೆಲೆಯಲ್ಲಿ ಈಗಾಗಲೇ ಚುನಾವಣಾ ಆಯೋಗ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಮತದಾರರು ಇವಿಎಂ ವಿದ್ಯುನ್ಮಾನ ಮತ ಯಂತ್ರಗಳ ಮೂಲಕ ಮತ ಚಲಾವಣೆ ಮಾಡುವ ಬಗ್ಗೆ ಜನಜಂಗುಳಿ ಹೆಚ್ಚಾಗಿ ಸೇರುವ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಪಟ್ಟಣದ ಎಲ್ಲಾ ಮತಗಟ್ಟೆಗಳಲ್ಲಿ ಜಾಗೃತಿ ಮೂಡಿಸಲು ಚುನಾವಣ ಆಯೋಗ ಆದೇಶಿಸಿದೆ ಅದರಂತೆ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಮತದಾರರು ಮತ ಚಲಾವಣೆ ಮಾಡುವ ವೇಳೆ ವಿದ್ಯುನ್ಮಾನ ಮತ ಯಂತ್ರಕ್ಕೆ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿ.ವಿ.ಪ್ಯಾಟ್, ಅಳವಡಿಸಲಾಗಿರುತ್ತದೆ. ನಾವು ಚಲಾಯಿಸುವ ಮತ ಯಾವ ಚಿಹ್ನೆಗೆ ಹಾಕಿದ್ದೇವೆ ಎಂಬುದು ಖಾತ್ರಿ ಪಡಿಸಿಕೊಳ್ಳಲು ವಿವಿಪ್ಯಾಟ್ ಸಹಕಾರಿಯಾಗಲಿದೆ. ಪ್ರತಿಯೊಬ್ಬ ಮತದಾರರು ತಮ್ಮ ಮತಗಳನ್ನು ಪೋಲು ಮಾಡದೆ ಮತ ಚಲಾವಣೆ ಮಾಡಲು ಇದೊಂದು ಉತ್ತಮ ಬೆಳವಣಿಗೆ ಎಂದರು.
ಈ ಸಂದರ್ಭದಲ್ಲಿ ಚುನಾವಣಾ ಶಾಖೆಯ ಸಿಬ್ಬಂದಿ ಬಾಲಕೃಷ್ಣ, ನಂದೀಶ್, ವಿನಯ್, ಇನ್ನಿತರರು ಹಾಜರಿದ್ದರು.