ಇವಾನ್ ಬಿಡುಗಡೆಗೆ ಪುಟಿನ್ ಪ್ರಯತ್ನ

ಮಾಸ್ಕೋ (ರಷ್ಯಾ), ಫೆ.೯- ರಷ್ಯಾದಲ್ಲಿ ಬಂಧನಕ್ಕೊಳಗಾಗಿರುವ ಅಮೆರಿಕಾ ವರದಿಗಾರ ಇವಾನ್ ಗೆರ್ಷ್ಕೋವಿಚ್‌ರನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಹತ್ವದ ಹೇಳಿಕೆ ನೀಡಿದ್ದಾರೆ. ಗೆರ್ಷ್ಕೋವಿಚ್ ಅವರನ್ನು ಮುಕ್ತಗೊಳಿಸಲು ಒಪ್ಪಂದವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಪುಟಿನ್ ತಿಳಿಸಿದ್ದಾರೆ. ಇವಾನ್ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು.
೨೦೨೨ರಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಪಾಶ್ಚಿಮಾತ್ಯ ಪತ್ರಕರ್ತನ ಜೊತೆ ಪುಟಿನ್ ಮಾತುಕತೆ ನಡೆಸಿದ್ದಾರೆ.
ಅಮೆರಿಕಾದ ಸುದ್ದಿಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಟಕರ್ ಕಾರ್ಲ್ಸನ್ ಜೊತೆ ಮಾತನಾಡಿದ ಪುಟಿನ್, ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಪತ್ರಕರ್ತನ ಬಗ್ಗೆ ಅಮೆರಿಕಾ ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ. ನಮ್ಮ ಪಾಲುದಾರರು (ಅಮೆರಿಕಾಪ) ಪರಸ್ಪರ ಕ್ರಮಗಳನ್ನು ತೆಗೆದುಕೊಂಡರೆ ಗೆರ್ಷ್ಕೋವಿಚ್ ಅವರನ್ನು ಬಿಡುಗಡೆ ಮಾಡಲು ಒಪ್ಪಂದವನ್ನು ಮಾಡಬಹುದು ಎಂದು ಪುಟಿನ್ ತಿಳಿಸಿದ್ದಾರೆ.
ಇನ್ನು ವಾಲ್ ಸ್ಟ್ರೀಟ್ ಜರ್ನಲ್‌ನ ವರದಿಗಾರ ಗೆರ್ಶ್ಕೋವಿಚ್ ಅವರನ್ನು ಕಳೆದ ವರ್ಷ ಮಾರ್ಚ್ ೨೯ ರಂದು ಮಾಸ್ಕೋದಿಂದ ಪೂರ್ವಕ್ಕೆ ೧,೬೦೦ ಕಿಮೀ (೧,೦೦೦ ಮೈಲುಗಳು) ಯೆಕಟೆರಿನ್‌ಬರ್ಗ್ ನಗರದಲ್ಲಿ ಬಂಧಿಸಲಾಯಿತು. ಇವಾನ್ ಅವರು ಗೂಡಾಚಾರ ಕಾರ್ಯ ನಡೆಸುತ್ತಿದ್ದಾರೆ ಎಂದು ರಷ್ಯಾ ಆರೋಪಿಸಿದೆ.