ಇಳಿವಯಸ್ಸಿನಲ್ಲಿ ಈರುಳ್ಳಿ ಬೆಳೆದ ವೃದ್ಧೆ: ವರುಣನ ಅಬ್ಬರಕ್ಕೆ ಸಾಲಕ್ಕೆ ಸಿಲುಕಿ ಕಣ್ಣೀರು

ಕಲಬುರಗಿ,ಅ.29: ಜಿಲ್ಲೆಯಲ್ಲಿ ಅತಿವೃಷ್ಟಿಯೊಂದಿಗೆ ಭೀಮಾ ನದಿ ಪ್ರವಾಹಕ್ಕೆ ಜನರ ಬದುಕು ಕೊಚ್ಚಿ ಹೋಗಿದೆ. ಮನೆ,ಮಠ ಕಳೆದುಕೊಂಡು ನದಿ ಪಾತ್ರದ ಜನರು ಬೀದಿಗೆ ಬಿದ್ದಿದ್ದಾರೆ. ಕೃಷಿಯಿಂದಲೇ ಜೀವನ ಸಾಗಿಸುತ್ತಿದ್ದ ಜಿಲ್ಲೆಯ ಅಫಜಲಪೂರ್ ತಾಲ್ಲೂಕಿನ ಹಸರಗುಂಡಗಿ ಗ್ರಾಮದ 70 ವರ್ಷದ ಹಿರಿಯಜ್ಜಿ ಗುಂಡಮ್ಮಳ ಬದುಕು ಕೂಡ ವರುಣನ ವಕ್ರ ದೃಷ್ಟಿಗೆ ನಲುಗಿ ಹೋಗಿದೆ.
ಇರುವ ಮೂರು ಎಕರೆಯಲ್ಲಿ ಈರುಳ್ಳಿ, ಹತ್ತಿ ಬೆಳೆದಿದ್ದ ಅಜ್ಜಿ, ಇದೀಗ ಕಣ್ಣೀರು ಹಾಕುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಮೂರು ಬಾರಿ ನಾಟಿ ಮಾಡಿದ್ದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ. ಹತ್ತಿ ಬೆಳೆಯಲ್ಲೂ ಮೊಣಕಾಲುದ್ದ ನೀರು ಶೇಖರಣೆಯಾಗಿ ಹಾಳಾಗಿದೆ.
ಹತ್ತಿ, ಈರುಳ್ಳಿ ಹಾಗೂ ಬಾವಿ ಹೂಳು ತೆಗೆಸಲು ಸುಮಾರು 4 ಲಕ್ಷ ರೂ.ಗಳನ್ನು ವೆಚ್ಚ ಮಾಡಿ ಸಾಲದ ಸುಳಿಯಲ್ಲಿ ಸಿಲುಕಿ ಹಿರಿಯ ಜೀವ ನರಳಾಡುತ್ತಿದೆ. ಇಳಿ ವಯಸ್ಸಿನಲ್ಲಿ ಬದುಕಿನ ಭರವಸೆ ಕಳೆದುಕೊಂಡು ಅಜ್ಜಿ ಕಣ್ಣೀರು ಹಾಕುತ್ತ ನೆರವಿನ ನಿರೀಕ್ಷೆಯಲ್ಲಿದ್ದಾರೆ.