ಇಲ್ಲೊಬ್ಬಳು ಸ್ವಾವಲಂಬಿ ಅಜ್ಜಿ !!

ಕಲಬುರಗಿ,ಡಿ 4: ತಲೆಯ ಮೇಲೆ ಒಂದು, ಕಂಕುಳಲ್ಲಿ ಮತ್ತೊಂದು ಚೀಲಗಳನ್ನು ಹೊತ್ತು ಕೋಲೂರಿಕೊಂಡು ಬರುತ್ತಿರುವ ಈ ಅಜ್ಜಿಯ ವಯಸ್ಸು ಅಂದಾಜು 80 ಸಮೀಪಿಸಿರಬಹುದು.ಇಂತಹ ಇಳಿವಯಸ್ಸಿನಲ್ಲಿಯೂ ಈ ಅಜ್ಜಿಯ ದುಡಿಯುವ ಛಲ ಯುವಕರನ್ನು ನಾಚಿಸುವಂತೆ ಮಾಡಿದೆ.
ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣ ಪ್ರದೇಶದಲ್ಲಿ ಈ ಅಜ್ಜಿ ನಿತ್ಯ ಪ್ರತ್ಯಕ್ಷಳಾಗುತ್ತಾಳೆ.ಅಲ್ಲಲ್ಲಿ ಬಿದ್ದ ಪ್ಲಾಸ್ಟಿಕ್ ಬಾಟಲು,ತಗಡಿನ ಡಬ್ಬಿ ಇತ್ಯಾದಿ ಗುಜರಿ ಸಾಮಗ್ರಿಗಳನ್ನು ಚೀಲಗಳಲ್ಲಿ ಸಂಗ್ರಹಿಸುತ್ತಾಳೆ.ನಂತರ ಸಂಗ್ರಹಿಸಿದ ಗುಜರಿ ಸಾಮಗ್ರಿಗಳನ್ನು ಮಾರಿ ಬಂದ ಅಲ್ಪಸ್ವಲ್ಪ ಹಣದಿಂದ ಉಪಜೀವನ ನಡೆಸುತ್ತಾಳೆ.
ಕೈ ಕಾಲು ಗಟ್ಟಿ ಇದ್ದರೂ ಸಹ ಭಿಕ್ಷಾಟನೆ ಮಾಡುವವರನ್ನು ನೋಡುತ್ತೇವೆ.ಆದರೂ ಉಸಿರು ನಿಂತು ಹೋಗುವವರೆಗೂ ದುಡಿದು ತಿನ್ನಬೇಕು ಎಂಬ ಈ ಅಜ್ಜಿಯ ಛಲ ಬದುಕಿಗೊಂದು ಪಾಠವಾಗಿದೆ.
ಕುಟುಂಬಗಳ ವಿಘಟನದಿಂದ ತಂದೆ ತಾಯಿ, ಹಿರಿಯರು ಎನ್ನುವ ಗೌರವಾದರ , ಇಳಿ ವಯಸ್ಸಿನಲ್ಲಿ ಅವರಿಗೆ ಆಶ್ರಯ ತಪ್ಪಿ ಸಂಕಷ್ಟಕ್ಕೆ ತುತ್ತಾಗುವ ದಾರುಣಚಿತ್ರ ಕಣ್ಣೆದುರಿಗೆ ಇದೆ. ಹೆಚ್ಚು ಹೆಚ್ಚು ವೃದ್ಧಾಶ್ರಮಗಳು ತಲೆ ಎತ್ತುತ್ತಿರುವ ಈ ದುರಿತ ಸಂದರ್ಭ ಕಳವಳಕಾರಿಯಾಗಿದೆ.
ಜನಪ್ರತಿನಿಧಿಗಳು,ಸಂಘಸಂಸ್ಥೆಯವರು, ಸರ್ಕಾರೇತರ ಸಂಸ್ಥೆಗಳು ಇಂತಹ ಹಿರಿಯ ನಾಗರಿಕರ ಬಾಳಿಗೆ ಆಸರೆಯಾಗಲು ಮುಂದೆ ಬರಬೇಕು.ಅವರಿಗೆ ನೆಮ್ಮದಿಯ ಬದುಕು ಕಲ್ಪಿಸಬೇಕು.