ಇಲಾಖೆಯ ವತಿಯಿಂದ ಕಲಾವಿದರಿಗೆ ಸಹಾಯ ಮಾಡಲು ಸಿದ್ದ; ಹೇಮಾವತಿ

sdr

ಬಾದಾಮಿ, ಏ16: ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದಾರೆ. ಇಲಾಖೆಯಿಂದ ನನ್ನ ಕೈಲಾದಷ್ಟು ಎಲ್ಲ ಕಲಾವಿದರಿಗೆ ಕಲೆಗಳ ಬೆಳವಣಿಗೆಗೆ ವಯಕ್ತಿಕವಾಗಿ ಮತ್ತು ಸಂಘ-ಸಂಸ್ಥೆಗಳ ಮೂಲಕ ಸಹಾಯ ಮಾಡುತ್ತೇನೆ ಎಂದು ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಹೇಮಾವತಿ ಎನ್. ಹೇಳಿದರು.
ಅವರು ಗುರುವಾರ ಸಮೀಪದ ಬನಶಂಕರಿ ಹಂಪಿ ಕನ್ನಡ ವಿವಿ ಕೇಂದ್ರದಲ್ಲಿ ಕರ್ನಾಟಕ ಲಲಿತ ಕಲಾ ಅಕಾಡಮಿ, ಹಂಪಿ ವಿವಿ ಬನಶಂಕರಿ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಲಾ ದಿನಾಚರಣೆ-2021 ಕಾರ್ಯಕ್ರಮದಲ್ಲಿ ರೇಖಾಚಿತ್ರ, ಕಾರ್ಯಾಗಾರ, ಉಪನ್ಯಾಸ ಮತ್ತು ಕಲಾ ಸಂವಾದ ಕಾರ್ಯಕ್ರಮವನ್ನು ರೇಖಾಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಲಾವಿದರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದಾಗ ಅರ್ಜಿ ಸಲ್ಲಿಸಿ ಕಲಾವಿದರಿಗೆ ಮತ್ತು ಸಂಘಗಳಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದರು. ಚಿತ್ರಕಲಾ ಶಿಕ್ಷಕ ಮಹಾದೇವ ಜಗತಾಪ ಕಲಾ ದಿನಾಚರಣೆ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಕಲಾ ಚಟುವಟಿಕೆಗಳು ಮಾನವನ ಅಭಿವೃದ್ಧಿ ಮತ್ತು ಕಲೆಯ ಸೃಜನಶೀಲತೆ ಆಂತರಿಕ ಶಕ್ತಿ ಬೆಳೆಯುತ್ತದೆ. ಲಲಿತ ಕಲೆ ಸಂಶೋಧನೆ ಮತ್ತು ಕಲೆಗಳನ್ನು ಉಳಿಸಿ ಬೆಳೆಸಬೇಕಿದೆ. ಚಿತ್ರಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ ಎಂದು ಹೇಳಿದರು.
ಹಂಪಿ ವಿವಿ ಬನಶಂಕರಿ ಕೇಂದ್ರದ ಆಡಳಿತಾಧಿಕಾರಿ ಡಾ.ಕೆ.ಎಚ್.ಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಕಾರ ಎಲ್ಲ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು. ಕಲಾ ಶಿಕ್ಷಕರ ಕೊರತೆ ಇದೆ. ಚಿತ್ರಕೂಟ ನಶಿಸಿ ಹೋಗುತ್ತಿದೆ. ಸೃಜನಶೀಲತೆ ಚಿತ್ರಕಲೆ ಬೆಳಕಾಗಬೇಕು. ಕಲಾ ಪ್ರಪಂಚ ಬತ್ತಿ ಹೋಗುತ್ತಿದೆ. ಕಳೆದ 25 ವರ್ಷಗಳಿಂದ ಚಿತ್ರಕಲಾ ಶಿಕ್ಷಕರ ನೇಮಕ ಮಾಡಿಕೊಂಡಿಲ್ಲ.ಎಲ್ಲ ಚಿತ್ರಕಲೆಯ ಶಿಕ್ಷಕರು ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು. ಸಂಶೋದಕ ಎ.ಕೆ.ಪೂಜಾರ ವೇದಿಕೆಯ ಮೇಲೆ ಹಾಜರಿದ್ದರು. ಕರ್ನಾಟಕ ಲಲಿತ ಕಲಾ ಅಕಾಡಮಿ ಸದಸ್ಯ ವಿರೇಶ ರುದ್ರಸ್ವಾಮಿ ಪ್ರಾಸ್ಥಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕಲಿಯಲು ಆಸಕ್ತಿ ಮುಖ್ಯ ಎಂದು ಹೇಳಿದರು. ಎನ್.ಎಂ.ಅಂಗಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿಗಳೊಂದಿಗೆ ಚಿತ್ರಕಲಾ ಸಂವಾದ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು ಹೊರಗಿನ ತಂಪಾದ ವಾತಾವರಣದಲ್ಲಿ ಚಿತ್ರಕಲೆ ಬಿಡಿಸಿದರು. ಚಿತ್ರಕಲಾ ವಿದ್ಯಾರ್ಥಿಗಳು ಹಾಜರಿದ್ದರು.