ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯವೇ ದುರ್ಘಟನೆಗೆ ಕಾರಣ: ಆರೋಪ

ತಿ.ನರಸೀಪುರ: ನ.09:- ತಾಲೂಕಿನ ಎಂ.ಎಲ್.ಹುಂಡಿ ಗ್ರಾಮದಲ್ಲಿ ನಡೆದ ಚಿರತೆ ದಾಳಿ ಮತ್ತು ನಿಲಸೋಗೆ ಗ್ರಾಮದಲ್ಲಿ ಸಂಭವಿಸಿದ ವಿದ್ಯುತ್ ಅವಘಡಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಬೇಜವಾಬ್ದಾರಿತನವೇ ಮುಖ್ಯ ಕಾರಣ ಎಂದು ರೈತ ಮತ್ತು ಹಸಿರು ಸೇನೆಯ ಜಿಲ್ಲಾ ಸಂಚಾಲಕ ಕಳ್ಳಿಪುರ ಮಹದೇವಸ್ವಾಮಿ ಆರೋಪಿಸಿದರು.
ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ದಲಿತ ಸಂಘರ್ಷ ಸಮಿತಿಗಳು ಜಂಟಿಯಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಇತ್ತೀಚಿಗಷ್ಟೇ ಎಂ.ಎಲ್.ಹುಂಡಿ ಗ್ರಾಮದ ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ಚಿರತೆ ದಾಳಿ ನಡೆಸಿ ಯುವಕನನ್ನು ಬಲಿ ಪಡೆದಿದೆ.ಹಾಗಾಗಿ ಸುತ್ತಮುತ್ತಲ ಗ್ರಾಮದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು,ವಿದ್ಯಾರ್ಥಿಗಳು ಕೂಡ ಶಾಲಾ -ಕಾಲೇಜಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಅಲ್ಲದೆ ದನಗಾಹಿಗಳು ತಮ್ಮ ಜಾನುವಾರುಗಳನ್ನು ಮೇಯಿಸಲು ಆತಂಕಗೊಂಡಿದ್ದಾರೆ.ಹಾಗಾಗಿ ನರಹಂತಕ ಚಿರತೆಯನ್ನು ಶೀಘ್ರ ಬಂಧಿಸಬೇಕು.ಈ ಹಿಂದೆಯೇ
ಚಿರತೆ ಇರುವಿಕೆಯ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಇಲಾಖಾ ಅಧಿಕಾರಿಗಳ ಬೇಜವಾಬ್ದಾರಿತನ ಈ ಅವಘಡಕ್ಕೆ ಪ್ರಮುಖ ಕಾರಣ ಎಂದು ಕಿಡಿಕಾರಿದರು.
ಘಟನೆಯ ನಂತರವೂ ಮಲ್ಲಿಕಾರ್ಜುನ ಬೆಟ್ಟದಲ್ಲಿ ಪೂಜೆ ನಡೆಯುತ್ತಿದ್ದು, ನರಹಂತಕ ಚಿರತೆಯನ್ನು ಬಂಧಿಸುವ ತನಕ ಬೆಟ್ಟದ ಅರಣ್ಯ ಪ್ರದೇಶವನ್ನು ‘ನಿಷೇಧಿತ ಪ್ರದೇಶ’ಎಂದು ಘೋಷಿಸಬೇಕು.ಅಲ್ಲಿಯ ತನಕ ಬೆಟ್ಟದಲ್ಲಿ ಪೂಜೆ ನಡೆಸದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.
ದಸಂಸ ಜಿಲ್ಲಾ ಸಂಚಾಲಕ ಅಲಗೂಡು ಡಾ.ಚಂದ್ರಶೇಖರ್ ಮಾತನಾಡಿ,ತಾಲೂಕಿನ ವಿವಿಧೆಡೆ ವಿದ್ಯುತ್ ಅವಘಡ ನಡೆದಿದ್ದು,ಇದು ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.ಇತ್ತೀಚಿಗೆ ನಿಲಸೋಗೆ ಮತ್ತು ಹಿರಿಯೂರು ಗ್ರಾಮಗಳಲ್ಲಿ ನಡೆದ ದಾರುಣ ಘಟನೆಗಳನ್ನು ಶಾಸಕರು ಪಕ್ಷಾತೀತವಾಗಿ ಕಂಡು ಸಂತ್ರಸ್ಥರ ಕುಟುಂಬವರ್ಗಕ್ಕೆ ಸೂಕ್ತ ಪರಿಹಾರವನ್ನು ಕೊಡಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಎಂ.ಎಲ್.ಹುಂಡಿ ಮತ್ತು ನಿಲಸೋಗೆ ಗ್ರಾಮಗಳಲ್ಲಿ ನಡೆದ ಘಟನಾ ಸ್ಥಳಕ್ಕೆ ತಾಲೂಕು ದಂಡಾಧಿಕಾರಿಗಳು ಇಲ್ಲಿಯ ತನಕ ಭೇಟಿ ನೀಡಿಲ್ಲ. ಈ ಬಗ್ಗೆ ಇದುವರೆವಿಗೂ ಅಧಿಕಾರಿಗಳ ಸಭೆ ನಡೆಸಿಲ್ಲ.ಇದು ತಾಲೂಕಿನ ಜನರ ಮೇಲೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಸಭೆಯಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ. ಜಿ.ಶಿವಪ್ರಸಾದ್, ವಿಭಾಗೀಯ ಸಂಚಾಲಕ ಮರಿಸ್ವಾಮಿ, ತಾಲೂಕು ಸಂಚಾಲಕ ಮನೋಜ್, ಟೌನ್ ಅಧ್ಯಕ್ಷ ಕಾಂತರಾಜು, ತಾಲೂಕು ಕಾರ್ಯದರ್ಶಿ ಸಂಪತ್ತು, ಜಯಶೇಖರಪ್ಪ, ಮಹೇಶ್, ಗುರುಸ್ವಾಮಿ ಇತರರು ಹಾಜರಿದ್ದರು.