ಇಲಕಲ್ಲ ಸಾರಿಗೆ ಘಟಕದಲ್ಲಿ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತ್ಯೋತ್ಸವ

ಇಲಕಲ್ಲ:ಜೂ.10: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗದ ಇಲಕಲ್ಲ ಸಾರಿಗೆ ಘಟಕದಲ್ಲಿ ಮಹಾಶಿವಚರಣೆ ಹೇಮರೆಡ್ಡಿ ಮಲ್ಲಮ್ಮನವರ 62 ಜಯಂತೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಮಹಾಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಘಟಕದ ವ್ಯವಸ್ಥಾಪಕ ಬಿರಾದಾರ್ ಹಾಗೂ ವೇದಿಕೆಯ ಮೇಲಿರುವ ಗಣ್ಯರು ಉದ್ಘಾಟಿಸಿದರು.

ಜಯಂತೋತ್ಸವ ಸಮಾರಂಭದಲ್ಲಿ ಇಲಕಲ್ಲ ಸಾರಿಗೆ ಘಟಕದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಲ್ಲಾ ನೌಕರರಿಗೆ ಇದೇ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತೋತ್ಸವ ಕುರಿತು ನಿರ್ವಾಹಕಿ ಮಲ್ಲಮ್ಮ ಪಾಟೀಲ್ ಮಾತನಾಡಿ, ತಾಯಿ ಹೇಮರೆಡ್ಡಿ ಮಲ್ಲಮ್ಮನವರು ಇಡೀ ಮಹಿಳಾ ಕುಲಕ್ಕೆ ಆದರ್ಶಪ್ರಾಯಳು, ಭಕ್ತಿಯ ಮೂಲಕ ದೇವರನ್ನು ಒಲಿಸಿಕೊಂಡ ಮಹಾದೇವತೆ ಹೇಮರೆಡ್ಡಿ ಮಲ್ಲಮ್ಮನವರು, ಇಂತಹ ಮಹಾನ್ ಶಿವಶರಣೆಯ ಆದರ್ಶ ನಮಗೆಲ್ಲರಿಗೂ ಮಾದರಿ ಎಂದು ಬಣ್ಣಿಸಿದರು.

ನಂತರ ಘಟಕದ ವ್ಯವಸ್ಥಾಪಕ ಜಿ.ಎಸ್. ಬಿರಾದರ ಮಾತನಾಡಿ ತನ್ನ ಭಕ್ತಿಯ ಮೂಲಕ ಭೂಮಂಡಲದ ಒಡೆಯ ಶ್ರೀಶೈಲ ಮಲ್ಲಿಕಾರ್ಜುನನ ಒಲಿಸಿಕೊಂಡ ಮಹಾನ್ ದೇವತೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರಾಗಿದ್ದಾರೆ. ದೇವರು ಪ್ರತ್ಯಕ್ಷರಾದಾಗ ಇಡೀ ಮನುಕುಲಕ್ಕೆ ಒಳಿತನ್ನು ಬಯಸಿದ ಶ್ರೇಷ್ಠ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರಾಗಿದ್ದಾರೆ ಎಂದರು.

ಈ ಜಯಂತೋತ್ಸವವನ್ನು ಇಲಕಲ್ಲ ಸಾರಿಗೆ ಘಟಕದ ರೆಡ್ಡಿ ಸಮಾಜದ ನೌಕರರು, ಹಾಗೂ ಇಲಕಲ್ಲ ಘಟಕದ ಎಲ್ಲಾ ನೌಕರರು ಹಾಗೂ ಸಿಬ್ಬಂದಿ ವರ್ಗದವರು ಕೂಡಿಕೊಂಡು ಈ ಜಯಂತೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ನೆರವೇರಿಸಿ ರುಚಿರುಚಿಯಾದ ಊಟವನ್ನು ಬಂದಂತಹ ಭಕ್ತಾದಿಗಳಿಗೆ ಉಣಪಡಿಸಿದರು.