ಇರ್ತಲೆ ಹಾವು ಮಾರಾಟ ಯತ್ನ: ಐವರ ಬಂಧನ

ಸುಳ್ಯ, ಮೇ ೫- ಇರ್ತಲೆ ಹಾವು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಐವರು ಕೇರಳ ಮೂಲದವರನ್ನು ಮಂಡೆಕೋಲು ಗ್ರಾಮದ ಮುರೂರು ರಾಜ್ಯ ಹೆದ್ದಾರಿಯಲ್ಲಿ ವಶಕ್ಕೆ ತೆಗೆದುಕೊಂಡು ಹಾವನ್ನು ವಶಪಡಿಸಿಕೊಂಡ ಘಟನೆ ನಿನ್ನೆ ನಡೆದಿದೆ.
ಬಂಧಿತರನ್ನು ಕಾಸರಗೋಡು ಜಿಲ್ಲೆಯ ಪಯ್ಯನ್ನೂರು ನಿವಾಸಿ ಜಬ್ಬರ್, ಅಶ್ರಫ್, ರಾಜೇಶ್, ರಮೇಶನ್, ಬಿಪಿನ್ ಎಂದು ತಿಳಿದುಬಂದಿದೆ. ಕೇರಳದ ಕಾಸರಗೋಡಿನಿಂದ ಸುಳ್ಯಕ್ಕೆ ಸ್ವಿಫ್ಟ್ ಕಾರಿನಲ್ಲಿ ಸುಮಾರು ೮ ಕೆ.ಜಿ. ತೂಕದ ಇರ್ತಲೆ ಹಾವನ್ನು ಸಾಗಿಸುತ್ತಿದ್ದಾಗ ಮುರೂರು ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿರುವುದನ್ನು ಗಮನಿಸಿದ ಆರೋಪಿಗಳು ತಕ್ಷಣ ತಮ್ಮ ಕಾರನ್ನು ಅರಣ್ಯ ಪ್ರದೇಶದೊಳಗೆ ಚಲಾಯಿಸಿದನ್ನು ಗಮನಿಸಿದ ಪೋಲೀಸರ ತಂಡ ಅವರನ್ನು ಚೇಸ್ ಮಾಡಿ ನಿಲ್ಲಿಸಿ ಪರಿಶೀಲಿಸಿದ ಸಂದರ್ಭ ಹಾವನ್ನು ಮಾರಾಟ ಮಾಡುವ ಉದ್ದೇಶದಿಂದ ಕೊಂಡೊಯ್ಯುತ್ತಿರುವ ವಿಷಯ ಬೆಳಕಿಗೆ ಬಂದಿತು. ಕಾರಿನಲ್ಲಿದ್ದ ಐವರನ್ನು ಅರಣ್ಯ ಸಂಚಾರಿ ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನೋಟ್ ಕೌಂಟಿಂಗ್ ಮೆಷಿನ್ ಹಾಗೂ ೨ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ. ಪುತ್ತೂರು ಪೋಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳಾದ ಎಸ್.ಐ.ಜಾನಕಿ, ಸುಂದರ ಶೆಟ್ಟಿ, ವಿಜಯ ಸುವರ್ಣ, ಉದಯ್, ಸಂತೋಷ್, ಸರಸ್ವತಿ ಯವರು ಕಾರ್ಯಾಚರಣೆಯಲ್ಲಿದ್ದರು.