ಇರುವುದೊಂದೆ ಭೂಮಿ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಕೋಲಾರ, ಜೂ,೬:ಇರುವ ಒಂಭತ್ತು ಗ್ರಹಗಳಲ್ಲಿ ಭೂಮಿ ಗ್ರಹದಲ್ಲಿ ಮಾತ್ರ ಮನುಷ್ಯ ಬದಕಲು ಸಾಧ್ಯವಾಗಿರುವುದು ಪ್ರಕೃತಿದತ್ತ ಕೊಡುಗೆಯಾಗಿದೆ. ಪ್ರಕೃತಿದತ್ತವಾದ ಭೂಮಿಯನ್ನು ಸಂರಕ್ಷಿಸುವುದು, ಪೋಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಕೋಲಾರ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್ ರವರು ಅಭಿಪ್ರಾಯಪಟ್ಟರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃಧ್ಧಿ ಕೇಂದ್ರ (ಸಿಡಾಕ್) ಕೋಲಾರ, ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ(ಹೆಚ್.ಆರ್.ಡಿ.ಸಿ) ಕೋಲಾರ, ಶ್ರೀಮಂಜುನಾಥ ಐಟಿಐ, ಮಂಗಸಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ “ವಿಶ್ವ ಪರಿಸರ ದಿನ” ಅಭಿಯಾನ ಕಾರ್ಯಕ್ರಮವನ್ನು ಶ್ರೀಮಂಜುನಾಥ ಐಟಿಐ ಆವರಣದಲ್ಲಿ ಗಿಡ ನೆಡುವ ಮುಖಾಂತರ ಉದ್ಘಾಟಿಸಿದರು.
ಮುಂದುವರೆದು ವೇದಿಕೆ ಕಾರ್ಯಕ್ರಮದಲ್ಲಿ ವಿಶ್ವ ಪರಿಸರ ದಿನದ ಘೋಷಣೆಯಾದ “ಪರಿಸರ ವ್ಯವಸ್ಥೆಯ ಪುನಃ ಸ್ಥಾಪನೆ” ಕುರಿತಾದ ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ವಿದ್ಯಾರ್ಥಿಗಳೊಂದಿಗೆ ಪ್ರದರ್ಶಿಸಿ ಅದರ ಮಹತ್ವ ವಿವರಣೆ ನೀಡಿ ಚಾಲನೆಗೊಳಿಸಿ ಮುಂದುವರೆದು ಮಾತನಾಡುತ್ತಾ ಪರಿಸರ ಜಾಗೃತಿ ಸಂರಕ್ಷಣೆ, ಉತ್ತೇಜನ ಕುರಿತಾಗಿ ಗಿಡ ಮರ ವನ ಬೆಳೆಸುವುದು ನೀರಿನ ಸದ್ಬಳಕೆ, ವಾಯುಮಾಲಿನ್ಯ ತಡೆ, ಪ್ಲಾಸ್ಟಿಕ್ ಬಳಕೆ ನಿಷೇಧ, ತಂತ್ರಜ್ಞಾನದ ಕೃಷಿ ಅಳವಡಿಕೆ, ನೀರಿನ ಮಿತ ಬಳಕೆ ಮುಂತಾದ ವಿಷಯಗಳ ಬಗ್ಗೆ ಎಲ್ಲರೂ ಸ್ವಚಿಂತನೆಯಿಂದ ಕಾರ್ಯ ಪ್ರವೃತ್ತ್ತರಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ (ಹೆಚ್.ಆರ್.ಡಿ.ಸಿ) ಕೋಲಾರ ಸಂಸ್ಥೆಯ ನಿರ್ದೇಶಕರಾದ ಎಂ.ವಿ.ನಾರಾಯಣಸ್ವಾಮಿ ಮಾತನಾಡಿ ವಿಶ್ವದ ಪರಿಸರ ಸಂರಕ್ಷಣೆ ಮಾಡುವ ಸಲುವಾಗಿ ಯು.ಎನ್. ೧೯೭೩ ರಲ್ಲಿ ವಿಶ್ವ ಪರಿಸರ ದಿನವನ್ನು ಜೂನ್ ೫ ರಂದು ಘೋಷಣೆ ಮಾಡಿ ಅಂದಿನಿಂದ ಐವತ್ತು ವರ್ಷಗಳಿಂದ ಪರಿಸರದ ಬಗ್ಗೆ ವಿಶ್ವಾದ್ಯಂತ ಜಾಗೃತಿಯನ್ನು ಮೂಡಿಸಲು ಆಚರಿಸಲಾಗುತ್ತಿದೆ ಎಂದರು. ಮಂಜುನಾಥ ಐಟಿಐಯ ಪ್ರಾಂಶುಪಾಲರಾದ ಗಂಗಾಧರ್ ರವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಿಡಾಕ್ ಕೋಲಾರ ಸಂಸ್ಥೆಯ ಆರ್.ಕಲ್ಯಾಣ್ ಕುಮಾರ್, ಮನೋಜ್ ಕುಮಾರ್ ಮುಂತಾದವರು ಮತ್ತು ಶ್ರೀ ಮಂಜುನಾಥ ಐಟಿಐ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಅಭಿಯಾನ ಕಾರ್ಯಕ್ರಮದ ಆರಂಭದಲ್ಲಿ ಶ್ರಮದಾನ ಮುಖಾಂತರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.