ಇರಾನ್, ಹಿಜ್ಬುಲ್ಲಾ ಉಗ್ರರರಿಗೆ ಬೆಂಜಮಿನ್ ಕಠಿಣ ಸಂದೇಶ

ಟೆಲ್ ಅವೀವ್, ಅ.೧೭- ಹಮಾಸ್ ಸೋಲಿಸಲು ಜಗತ್ತು ಒಗ್ಗೂಡುವ ಅಗತ್ಯವಿದ್ದು, ಇದು ನಿಮ್ಮೆಲ್ಲರ ಯುದ್ದವೂ ಆಗಿದೆ. ಹಮಾಸ್ ಮತ್ತು ನಾಝಿಗಳ ಮಧ್ಯೆ ವ್ಯತ್ಯಾಸವಿಲ್ಲ. ಉತ್ತರ ಇಸ್ರೇಲ್‌ನಲ್ಲಿ ನಮ್ಮನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕಿದರೆ ಮರೆಯಲಾಗದ ಪಾಠ ಕಲಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ಮತ್ತು ಹಿಜ್ಬುಲ್ಲಾಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಈ ನಡುವೆ ನಾಳೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಇಸ್ರೇಲ್‌ಗೆ ಭೇಟಿ ನೀಡಿ, ಪ್ರಧಾನಿ ಬೆಂಜಮಿನ್ ನೆತ್ಯಾನ್ಯಾಹು ಜೊತೆ ಮಾತುಕತೆ ನಡೆಸಲಿದ್ದಾರೆ. ಇನ್ನು ಅತ್ತ ಗಾಜಾ ಪಟ್ಟಿಗೆ ಮಾನವೀಯ ನೆರವು ನೀಡುವ ರಾಜತಾಂತ್ರಿಕ ಪ್ರಯತ್ನಗಳು ವಿಫಲವಾಗಿದ್ದು, ಸಹಜವಾಗಿಯೇ ಯುದ್ದದ ಗಾತ್ರ ಮತ್ತಷ್ಟು ವಿಸ್ತರಣೆಯಾಗುವ ಭೀತಿ ಮೂಡಿದೆ.


ಇಸ್ರೇಲ್ ಸಂಸತ್ತಿನಲ್ಲಿ ಅವರು ಈ ಬಗ್ಗೆ ಮಾತನಾಡಿದ ಅವರು. ಸದ್ಯ ಎಲ್ಲರ ಚಿತ್ತ ಗಾಜಾ ಹಾಗೂ ಈಜಿಪ್ಟ್ ನಡುವಿನ ಗಡಿ ಪ್ರದೇಶದತ್ತ ನೆಟ್ಟಿದೆ. ಇಲ್ಲಿನ ರಾಫಾ ಕ್ರಾಸಿಂಗ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಹಾರ ಸಾಮಗ್ರಿಗಳನ್ನು ಹೊತ್ತು ಲಾರಿಗಳು ಹಲವು ದಿನಗಳಿಂದ ನಿಂತುಕೊಂಡಿದೆ. ಈ ನಡುವೆ ಹಲವು ಮಂದಿ ಕದನ ವಿರಾಮಕ್ಕಾಗಿ ಆಗ್ರಹಿಸುತ್ತಿದ್ದರೂ ಇಸ್ರೇಲ್ ಮಾತ್ರ ಸಂಪೂರ್ಣ ಗಾಜಾ ಪಟ್ಟಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಮುಖ್ಯವಾಗಿ ರಾಫಾ ಕ್ರಾಸಿಂಗ್‌ನಲ್ಲಿ ಈಜಿಪ್ಟ್ ಪರಿಣಾಮಕಾರಿ ಕ್ರಮ ತೆಗೆದುಕೊಂಡಿದ್ದರೂ ಗಾಜಾ ಕಡೆಯಿಂದ ಇದು ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈಜಿಪ್ಟ್ ವಿದೇಶಾಂಗ ಸಚಿವ ಸಮೇಹ್ ಶೌಕ್ರಿ, ಗಾಜಾ ಕಡೆಯ ಗಡಿ ತೆರೆಯಲು ಇಸ್ರೇಲ್ ಯಾವುದೇ ಧನಾತ್ಮಕ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಯುದ್ದ ಆರಂಭವಾದಂದಿನಿಂದ ಇಲ್ಲಿಯ ವರೆಗೆ ಸುಮಾರು ೨೮೦೦ ಪ್ಯಾಲೆಸ್ತೀನಿಯರು ಮೃತಪಟ್ಟಿದ್ದರೆ ೧೦,೦೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಗಾಜಾದಲ್ಲಿನ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿವೆ. ಆಸ್ಪತ್ರೆಗಳಲ್ಲಿ ನೀರಿನ ಕೊರತೆ ಎದುರಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸುಮಾರು ೬ ಲಕ್ಷ ಜನರನ್ನು ಗಾಜಾದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ನೆಲೆಗೊಳಿಸಲಾಗಿದೆ. ಸುಮಾರು ೩ ಲಕ್ಷ ಜನರನ್ನು ವಿಶ್ವಸಂಸ್ಥೆ ಪರಿಹಾರ ಶಿಬಿರಗಳಲ್ಲಿ ನೆಲೆಗೊಳಿಸಲಾಗಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ ಹೇಳಿದೆ. ಗಾಜಾ ಪ್ರದೇಶದಲ್ಲಿ ನಾಪತ್ತೆಯಾಗಿರುವರ ಸಂಖ್ಯೆ ೧ ಸಾವಿರವನ್ನು ದಾಟಿದ್ದು ಇವರು ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದೆ ಎಂದು ಫೆಲೆಸ್ತೀನಿಯನ್ ನಾಗರಿಕ ರಕ್ಷಣಾ ಪಡೆ ಹೇಳಿದೆ. ಇಸ್ರೇಲ್ ನ ಸುಮಾರು ೧೫೦ ಒತ್ತೆಯಾಳುಗಳನ್ನು ಹಮಾಸ್ ಭೂಗತ ಬಂಕರ್ ಹಾಗೂ ಸುರಂಗಗಳಲ್ಲಿ ಇರಿಸಿದೆ ಎಂಬ ವರದಿಯಿದ್ದು ಇದು ಇಸ್ರೇಲ್ ಕಾರ್ಯಾಚರಣೆಗೆ ಹಿನ್ನಡೆಯಾಗ ಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇಸ್ರೇಲ್ ನೆಲದ ಮೇಲಿನ ಕಾರ್ಯಾಚರಣೆ ಆರಂಭಿಸಿದರೆ ಇದರಿಂದ ಭೀಕರ ಪರಿಣಾಮ ಆಗಬಹುದು ಮತ್ತು ಅಸಾಮಾನ್ಯ ಮಟ್ಟದ ನರಮೇಧಕ್ಕೆ ಕಾರಣವಾಗಬಹುದು ಎಂದು ಅರಬ್ ಲೀಗ್ ಮತ್ತು ಆಫ್ರಿಕನ್ ಯೂನಿಯನ್ ಎಚ್ಚರಿಕೆ ನೀಡಿದೆ.

ಅಂತ್ಯಗೊಳ್ಳುತ್ತಿರುವ ಗಾಝಾದ ಬದುಕು
ಗಾಜಾ ಪಟ್ಟಿಯ ಮೇಲಿನ ಇಸ್ರೇಲ್ ದಾಳಿಯು ಫೆಲೆಸ್ತೀನಿಯನ್ ಪ್ರದೇಶದಲ್ಲಿ ಅಸಾಮಾನ್ಯ ಮಾನವ ದುರಂತಕ್ಕೆ ಕಾರಣವಾಗಿದೆ. ಗಾಜಾದಲ್ಲಿ ನೀರಿನ ಕೊರತೆ ತಲೆದೋರಿದ್ದು ಗಾಜಾದ ಬದುಕು ಅಂತ್ಯಗೊಳ್ಳುತ್ತಿದೆ ಎಂದು ಫೆಲೆಸ್ತೀನಿಯನ್ ನಿರಾಶ್ರಿತರಿಗೆ ನೆರವು ಒದಗಿಸುವ ವಿಶ್ವಸಂಸ್ಥೆ ಏಜೆನ್ಸಿ (ಯುಎನ್‌ಆರ್‌ಡಬ್ಲ್ಯೂಎ) ಕಳವಳ ವ್ಯಕ್ತಪಡಿಸಿದೆ.
ಒಂದು ಹನಿ ನೀರೂ ಇಲ್ಲ, ಒಂದು ಕಾಳಿನಷ್ಟೂ ಗೋಧಿಯಿಲ್ಲ. ಅಡುಗೆ ಮಾಡಲು ಇಂಧನವೂ ಇಲ್ಲ. ಇದು ಗಾಜಾ ಪಟ್ಟಿಯಲ್ಲಿ ಕಳೆದ ೮ ದಿನದಿಂದ ಇರುವ ಪರಿಸ್ಥಿತಿ. ನಮ್ಮ ತಂಡ ಗಾಜಾದಲ್ಲಿನ ನಿರಾಶ್ರಿತರಿಗೆ ನೆರವು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಯುಎನ್‌ಆರ್‌ಡಬ್ಲ್ಯೂಎ ಕಮಿಷನರ್ ಜನರಲ್ ಫಿಲಿಪ್ ಲಝಾರಿನಿ ಹೇಳಿದ್ದಾರೆ. ವಾಸ್ತವವಾಗಿ ಗಾಜಾದ ಕತ್ತನ್ನು ಹಿಸುಕಲಾಗುತ್ತಿದೆ ಮತ್ತು ಯುದ್ಧವು ಈಗ ತನ್ನ ಮಾನವೀಯತೆಯನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ನೀರು ಜೀವನಾಧಾರವಾಗಿದೆ. ಸಂಘರ್ಷದ ಬಳಿಕ ಕಳೆದ ೮ ದಿನದಲ್ಲಿ ಸುಮಾರು ೧ ದಶಲಕ್ಷ ಜನತೆ ಗಾಜಾದಿಂದ ಪಲಾಯನ ಮಾಡಿದ್ದಾರೆ. ಸ್ಥಳಾಂತರ ಪ್ರಕ್ರಿಯೆ ಮುಂದುವರಿದೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ, ದಕ್ಷಿಣ ಗಾಜಾಕ್ಕೆ ನೀರಿನ ಪೂರೈಕೆಯನ್ನು ಆರಂಭಿಸಲಾಗಿದೆ ಎಂದು ಇಸ್ರೇಲ್ ನ ಇಂಧನ ಸಚಿವ ಇಸ್ರೇಲ್ ಕಾರ್ಟ್ಸ್ ಹೇಳಿದ್ದಾರೆ. ಶತ್ರುಗಳ ಪ್ರದೇಶಕ್ಕೆ ನೀರು ಪೂರೈಕೆ ಬಂದ್ ಮಾಡಲಾಗಿದೆ. ಇದರಿಂದ ಉತ್ತರ ಗಾಜಾದಿಂದ ದಕ್ಷಿಣದತ್ತ ತೆರಳುವವರ ಪ್ರಮಾಣ ದಿಢೀರನೆ ಹೆಚ್ಚಿದೆ ಎಂದವರು ಹೇಳಿದ್ದಾರೆ. ದಕ್ಷಿಣ ಗಾಜಾಕ್ಕೆ ನೀರು ಪೂರೈಕೆ ಪುನರಾರಂಭ ಆಗಿರುವುದನ್ನು ಅಲ್ಲಿನ ನಗರಪಾಲಿಕೆ ದೃಢಪಡಿಸಿದೆ.

ಸಂಘರ್ಷದಲ್ಲಿ ಅಮೆರಿಕಾ ಭಾಗಿ: ಇರಾನ್
ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಅಮೆರಿಕ ಈಗಾಗಲೇ ಭಾಗಿಯಾಗಿರುವುದರಿಂದ ಯುದ್ಧದ ದುರಂತಕ್ಕೆ ಅದನ್ನು ಹೊಣೆಯಾಗಿಸಬೇಕು ಎಂದು ಇರಾನ್ ಆರೋಪಿಸಿದೆ.
ಸಂಷರ್ಘದಲ್ಲಿ ಅಮೆರಿಕ ಭಾಗಿಯಾದರೆ ಇರಾನ್ ಕೂಡಾ ಪಾಲ್ಗೊಳ್ಳುವುದೇ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ನಾಸೆರ್ ಕನ್ನಾನಿ ‘ಇಸ್ರೇಲ್-ಫೆಲೆಸ್ತೀನ್ ಸಂಘರ್ಷದಲ್ಲಿ ಅಮೆರಿಕ ಈಗಾಗಲೇ ಮಿಲಿಟರಿಯಾಗಿ ತೊಡಗಿಸಿಕೊಂಡಿದೆ ಎಂದು ನಾವು ಪರಿಗಣಿಸಿದ್ದೇವೆ. ಯೆಹೂದಿ ಆಡಳಿತದ ಅಪರಾಧ ಕೃತ್ಯಗಳು ಅಮೆರಿಕದ ಬೆಂಬಲದಿಂದ ನಡೆಯುತ್ತಿದೆ ಮತ್ತು ಇದಕ್ಕೆ ಅಮೆರಿಕವನ್ನೇ ಹೊಣೆಯಾಗಿಸಬೇಕು ಎಂದರು. ಫೆಲೆಸ್ತೀನೀಯರ ವಿರುದ್ಧದ ಆಕ್ರಮಣವನ್ನು ಅಂತ್ಯಗೊಳಿಸದಿದ್ದರೆ ಈ ವಲಯದ ಇತರ ದೇಶಗಳೂ ಕಾರ್ಯನಿರ್ವಹಿಸಲು ಸಿದ್ಧವಾಗಿವೆ ಎಂದು ಇರಾನಿನ ವಿದೇಶಾಂಗ ಸಚಿವ ಹುಸೇನ್ ಅಮಿರಬ್ದುಲ್ಲಾಹಿಯಾನ್ ಇಸ್ರೇಲ್ ಗೆ ಎಚ್ಚರಿಕೆ ನೀಡಿದ್ದಾರೆ. ಗಾಜಾದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲು ಇಸ್ರೇಲ್ ಆಡಳಿತಕ್ಕೆ ಅವಕಾಶ ನೀಡಲ್ಲ. ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಮತ್ತು ಗಾಜಾದ ಜನರ ವಿರುದ್ಧ ಮಾಡಿದ ಯುದ್ಧ ಅಪರಾಧಗಳ ಬಗ್ಗೆ ನಾವು ಅಸಡ್ಡೆ ಹೊಂದಲು ಸಾಧ್ಯವಿಲ್ಲ. ಪ್ರತಿರೋಧ ಮುಂಭಾಗವು ಶತ್ರುಗಳೊಂದಿಗೆ (ಇಸ್ರೇಲ್) ದೀರ್ಘಾವಧಿಯ ಯುದ್ಧವನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಒಂದು ವೇಳೆ ಸಂಘರ್ಷ ಈ ವಲಯದ ಇತರ ಪ್ರದೇಶಗಳಿಗೆ ವ್ಯಾಪಿಸಿದರೆ ಅಥವಾ ಈಗ ನಡೆಯುತ್ತಿರುವ ಸಂಘರ್ಷ ಉಲ್ಬಣಿಸಿದರೆ ಅದರ ಹೊಣೆ ನೇರವಾಗಿ ಇಸ್ರೇಲ್ ಮತ್ತು ಅಮೆರಿಕದ ಹೆಗಲಿಗೆ ವರ್ಗಾವಣೆಯಾಗುತ್ತದೆ ಎಂದವರು ಎಚ್ಚರಿಕೆ ನೀಡಿದ್ದಾರೆ.

ಹಿಜ್ಬುಲ್ಲಾ ನೆಲೆಗಳ ಮೇಲೆ ದಾಳಿ
ಒಂದೆಡೆ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಉಗ್ರರ ನೆಲೆಗಳ ಮೇಲೆ ಸತತ ಬಾಂಬ್ ದಾಳಿ ನಡೆಸುತ್ತಿರುವ ಇಸ್ರೇಲ್ ಇದೀಗ ಮತ್ತೊಂದು ಹೆಜ್ಜೆ ಇಟ್ಟಿದೆ. ಲೆಬನಾನ್‌ನಲ್ಲಿರುವ ಹೆಜ್ಬುಲ್ಲಾ ಉಗ್ರವಾದಿಗಳ ನೆಲೆಗಳ ಮೇಲೆ ವಾಯುದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಈಗಾಗಲೇ ಲೆಬನಾನ್‌ನಲ್ಲಿರುವ ಉಗ್ರರ ನೆಲೆಗಳಿಂದಲೂ ಕೂಡ ಇಸ್ರೇಲ್ ಮೇಲೆ ದಾಳಿ ನಡೆಸಲು ಆರಂಭವಾಗಿದ್ದು, ಇಲ್ಲಿರುವ ಹಿಜ್ಬುಲ್ಲಾ ಉಗ್ರ ಸಂಘಟನೆ ಇದರಲ್ಲಿ ಮುಖ್ಯ ಪಾತ್ರ ವಹಿಸಿದೆ. ಈಗಾಗಲೇ ಲೆಬನಾನ್ ಕಡೆಯಿಂದ ಹಲವು ಕ್ಷಿಪಣಿಗಳನ್ನು ಉಡಾಯಿಸಲಾಗಿದ್ದು, ಇದೀಗ ಇದಕ್ಕೆ ತಿರುಗೇಟು ಎಂಬಂತೆ ಇಸ್ರೇಲ್ ಕೂಡ ದಾಳಿ ನಡೆಸಲು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಉಗ್ರವಾದಿಗಳ ನೆಲೆಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ.

ನಾಳೆ ಇಸ್ರೇಲ್‌ಗೆ ಬೈಡೆನ್
ಈಗಾಗಲೇ ಹಮಾಸ್ ಹಾಗೂ ಇಸ್ರೇಲ್ ನಡುವೆ ಯುದ್ದ ಆರಂಭವಾಗಿ ಹಲವು ದಿನಗಳು ಕಳೆದಿದೆ. ಈ ಅವಧಿಯಲ್ಲಿ ಇಸ್ರೇಲ್‌ಗೆ ಅಮೆರಿಕಾ ವಿದೇಶಾಂಗ ಸಚಿವ ಆಂಥನಿ ಬ್ಲಿಂಕೆನ್ ಹಾಗೂ ರಕ್ಷಣಾ ಸಚಿವ ಆಸ್ಟಿನ್ ಅವರು ಭೇಟಿ ನೀಡಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಅದೂ ಅಲ್ಲದೆ ಬ್ಲಿಂಕೆನ್ ಅವರು ಮಧ್ಯಪ್ರಾಚ್ಯ ರಾಷ್ಟ್ರಗಳಿಗೂ ಭೇಟಿ ನೀಡಿ, ಯುದ್ದ ವಿಸ್ತರಣೆಯಾಗದಂತೆ ಕ್ರಮ ತೆಗೆದುಕೊಂಡಿದ್ದರು. ಇದರ ನಡುವೆ ಇದೀಗ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಬುಧವಾರ ಇಸ್ರೇಲ್‌ಗೆ ಭೇಟಿ ನೀಡಲಿದ್ದು, ಪ್ರಧಾನಿ ಬೆಂಜಮಿನ್ ನೆತ್ಯಾನ್ಯಾಹು ಜೊತೆ ಚರ್ಚೆ ನಡೆಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಲಿಂಕೆನ್, ದಾನಿ ರಾಷ್ಟ್ರಗಳು ಮತ್ತು ಬಹುಪಕ್ಷೀಯ ಸಂಸ್ಥೆಗಳಿಂದ ಮಾನವೀಯ ನೆರವು ಗಾಜಾದ ನಾಗರಿಕರನ್ನು ತಲುಪಲು ಅನುವು ಮಾಡಿಕೊಡುವ ಯೋಜನೆಯನ್ನು ಅಭಿವೃದ್ಧಿಪಡಿಸಲು ಅಮೆರಿಕಾ ಮತ್ತು ಇಸ್ರೇಲ್ ಒಪ್ಪಿಕೊಂಡಿವೆ ಎಂದು ಹೇಳಿದರು.

ಇದೊಂದು ಸುದೀರ್ಘ ಯುದ್ದ
ಒಂದೆಡೆ ರಷ್ಯಾ ಹಾಗೂ ಉಕ್ರೇನ್ ನಡುವೆ ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚಿನ ಕಾಲ ಯುದ್ದ ನಡೆಯುತ್ತಿದ್ದರೆ ಇದೀಗ ಹಮಾಸ್ ಉಗ್ರರ ವಿರುದ್ಧ ಗಂಭೀರ ರೀತಿಯಲ್ಲಿ ಸಮರ ಸಾರಿರುವ ಇಸ್ರೇಲ್ ಇದೀಗ ನಮ್ಮದು ಸುದೀರ್ಘ ಯುದ್ದವೆಂದು ತಿಳಿಸಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಯುದ್ದದ ಮತ್ತಷ್ಟು ಕಾರ್ಮೋಡ ಗೋಚರಿಸಿದೆ. ಕಳೆದ ಮೂರು ದಿನಗಳಲ್ಲಿ ಇಸ್ರೇಲ್‌ಗೆ ಎರಡನೇ ಬಾರಿ ಭೇಟಿ ನೀಡಿದ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಥನಿ ಬ್ಲಿಂಕೆನ್ ಜೊತೆ ಮಾತನಾಡಿದ ಇಸ್ರೇಲ್ ರಕ್ಷಣಾ ಸಚಿವ ಯಾವ್ ಗೆಲ್ಲೆಂಟ್, ಇಸ್ರೇಲ್‌ಗೆ ಅಮೆರಿಕಾದ ಬೆಂಬಲವನ್ನು ಇಡೀ ವಿಶ್ವವೇ ನೋಡಬಹುದು. ಮಿಸ್ಟರ್ ಕಾರ್ಯದರ್ಶಿಯವರೇ, ಇದೊಂದು ಸುದೀರ್ಘ ಯುದ್ದವಾಗಿರಲಿದೆ. ಇದರ ಮೌಲ್ಯ ಹೆಚ್ಚಾಗಿದ್ದರೂ ನಾವು ಗೆಲುವು ಸಾಧಿಸಲಿದ್ದೇವೆ ಎಂದು ತಿಳಿಸಿದ್ದಾರೆ.