ಇರಾನ್ ಕ್ಷಿಪಣಿ ದಾಳಿ:ಪಾಕ್‌ನಲ್ಲಿ ಮಕ್ಕಳಿಬ್ಬರ ಸಾವು

ಇಸ್ಲಾಮಾಬಾದ್ (ಪಾಕಿಸ್ತಾನ), ಜ.೧೭- ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಬಲೂಚಿಸ್ತಾನ್‌ನ ವಿಶಾಲವಾದ ನೈಋತ್ಯ ಪ್ರಾಂತ್ಯದ ಹಳ್ಳಿಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟು, ಮೂವರು ಬಾಲಕಿಯರು ಗಾಯಗೊಂಡ ಘಟನೆ ನಡೆದಿದೆ. ಜೈಶ್ ಅಲ್ ಅದ್ಲ್ ಉಗ್ರ ಸಂಘಟನೆಯ ಎರಡು ನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇರಾನ್ ತಿಳಿಸಿದ್ದು, ಸಹಜವಾಗಿಯೇ ಅತ್ತ ಪಾಕ್ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.
ಕಳೆದ ಕೆಲವು ದಿನಗಳಲ್ಲಿ ಇರಾಕ್, ಸಿರಿಯಾ ಬಳಿಕ ಇದೀಗ ಪಾಕಿಸ್ತಾನದ ಮೇಲೆ ಕೂಡ ಇರಾನ್ ದಾಳಿ ನಡೆಸಿದೆ. ಇರಾಕ್ ಹಾಗೂ ಸಿರಿಯಾದಲ್ಲಿರುವ ಉಗ್ರ ಸಂಘಟನೆಗಳು ಇರಾನ್‌ನಲ್ಲಿ ದುಷ್ಕೃತ್ಯ ನಡೆಸುತ್ತಿದೆ ಎಂದು ಇರಾನ್ ಆರೋಪಿಸುತ್ತಲೇ ಬಂದಿತ್ತು. ಇದೀಗ ಪಾಕ್‌ನ ಬಲೂಚಿಸ್ಥಾನ್‌ನಲ್ಲಿರುವ ಜೈಶ್ ಅಲ್ ಅದ್ಲ್ ಸಂಘಟನೆಯ ಎರಡು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇನ್ನು ಕ್ಷಿಪಣಿ ದಾಳಿಯ ಹಿನ್ನೆಲೆಯಲ್ಲಿ ಪಾಕ್‌ನಲ್ಲಿರುವ ಇರಾನ್ ರಾಯಬಾರಿಯನ್ನು ಇಸ್ಲಾಮಾಬಾದ್‌ಗೆ ಕರೆಸಿಕೊಂಡಿರುವ ಪಾಕ್ ಸರ್ಕಾರ, ತನ್ನ ದೇಶದ ವಾಯು ಪ್ರದೇಶದ ಮೇಲಿನ ಅಪ್ರಚೋದಿತ ಉಲ್ಲಂಘನೆಯನ್ನು ಬಲವಾಗಿ ಖಂಡಿಸಿದೆ. ಪಾಕಿಸ್ತಾನದ ಸಾರ್ವಭೌಮತ್ವದ ಉಲ್ಲಂಘನೆಯ ಈ ಪ್ರಕರಣ ಸ್ವೀಕಾರಾರ್ಹವಲ್ಲ ಮತ್ತು ಇದು ಗಂಭೀರ ಪರಿಣಾಮಗಳನ್ನು ಬೀರಲಿದೆ. ಪಾಕಿಸ್ತಾನ ಹಾಗೂ ಇರಾನ್ ನಡುವೆ ಸಂವಹನದ ಹಲವು ಮಾರ್ಗಗಳು ಇದ್ದರೂ, ಈ ಅಕ್ರಮ ಕೃತ್ಯವು ನಡೆದಿದೆ ಎನ್ನುವುದು ಹೆಚ್ಚು ಕಳವಳಕಾರಿ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ. ಭಯೋತ್ಪಾದಕತೆ ಈ ಭಾಗದ ಎಲ್ಲ ದೇಶಗಳಿಗೆ ಸಮಾನ ಅಪಾಯ ಎನ್ನುವುದನ್ನು ಪಾಕಿಸ್ತಾನ ಪ್ರತಿಪಾದಿಸುತ್ತಲೇ ಬಂದಿದೆ ಹಾಗೂ ಇದರ ತಡೆಗೆ ಪರಸ್ಪರ ಸಮನ್ವಯದ ಕ್ರಮ ಅಗತ್ಯವಾಗಿದೆ. ಇಂಥ ಏಕಪಕ್ಷೀಯ ಕೃತ್ಯಗಳು ನೆರೆಹೊರೆಯ ದೇಶಗಳ ನಡುವಿನ ಉತ್ತಮ ಬಾಂಧವ್ಯಕ್ಕೆ ಪೂರಕವಲ್ಲ ಹಾಗೂ ದ್ವಿಪಕ್ಷೀಯ ವಿಶ್ವಾಸಕ್ಕೆ ಗಂಭೀರವಾಗಿ ಧಕ್ಕೆ ತರುವಂಥದ್ದು ಎಂದು ಸಚಿವಾಲಯ ಖಂಡಿಸಿದೆ. ದಶಕಗಳ ಕಾಲ ಪಾಕಿಸ್ತಾನ ಗಡಿ ಪ್ರದೇಶದಲ್ಲಿರುವ ಜೈಶ್ ಅಲ್ ಅದ್ಲ್ ಎಂಬ ಪ್ರತ್ಯೇಕತಾವಾದಿ ಸಂಘಟನೆಯ ಜೊತೆ ಇರಾನ್ ಹೋರಾಟ ನಡೆಸುತ್ತಲೇ ಬಂದಿದೆ. ಎರಡೂ ದೇಶಗಳು ಬರೊಬ್ಬರಿ ೯೦೦ ಕಿ.ಮೀ. ವ್ಯಾಪ್ತಿಯ ಗಡಿ ಪ್ರದೇಶವನ್ನು ಹಂಚಿಕೊಂಡಿದ್ದು, ಇಲ್ಲಿನ ಪರಿಸ್ಥಿತಿ ಸದಾ ಆತಂಕದಿಂದ ಕೂಡಿದೆ. ಕಳೆದ ತಿಂಗಳು ಇರಾನ್ ವ್ಯಾಪ್ತಿಯ ಗಡಿಯಲ್ಲಿ ನಡೆದ ದಾಳಿಯಲ್ಲಿ ಇರಾನ್‌ನ ೧೨ ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದರು. ಪಾಕಿಸ್ತಾನದಿಂದಲೇ ಉಗ್ರರು ಪ್ರವೇಶಿಸಿದ್ದಾರೆ ಎಂದು ಇರಾನ್ ಆ ವೇಳೆ ಆರೋಪಿಸಿತ್ತು. ಜೈಶ್ ಅಲ್-ಅದ್ಲ್ ಬಲುಚೆಸ್ತಾನ್‌ನ ಸಿಸ್ತಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಸಕ್ರಿಯ ಮತ್ತು ಪ್ರಭಾವಶಾಲಿ ಸುನ್ನಿ ಉಗ್ರಗಾಮಿ ಗುಂಪು ಎಂದು ಯುಎಸ್ ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ ತಿಳಿಸಿದೆ.