ಇರಾನ್‌ನ ನತಾನ್ಝ್ ಪರಮಾಣು ಘಟಕದ ಮೇಲೆ ಸೈಬರ್ ದಾಳಿ

ಟೆಹ್ರಾನ್, ಎ.೧೨- ಎರಡು ದಿನಗಳ ಹಿಂದಷ್ಟೇ ಯುರೇನಿಯಂ ಪುಷ್ಟೀಕರಣ ಸಾಧನೆ ಪ್ರದರ್ಶಿಸಿದ್ದ ಇರಾನ್‌ಗೆ ಇದೀಗ ಆಘಾತ ಕಂಡಿದೆ. ಇರಾನ್‌ನ ನತಾನ್ಝ್ ಪರಮಾಣು ಘಟಕದ ಮೇಲೆ ವಿಧ್ವಂಸಕ ದಾಳಿ ನಡೆದಿರುವ ಸಂಗತಿ ಬಹಿರಂಗವಾಗಿದೆ. ಆದರೆ ದಾಳಿಯ ಹಿಂದಿರುವ ಸಂಗತಿಯನ್ನು ಇರಾನ್ ಬಹಿರಂಗಪಡಿಸಿಲ್ಲ.
ದಕ್ಷಿಣ ಟೆಹ್ರಾನ್‌ನ ನತಾನ್ಝ್‌ನ ಪರಮಾಣು ಘಟಕದ ಮೇಲಿನ ವಿಧ್ವಂಸಕ ದಾಳಿಯ ಪರಿಣಾಮ ಅಲ್ಲಿ ವಿದ್ಯುತ್ ವೈಫಲ್ಯಕ್ಕೀಡಾಗಿದೆ. ಆದರೆ ಮೂಲಗಳ ಪ್ರಕಾರ ದಾಳಿಯ ಹಿಂದೆ ಇಸ್ರೇಲಿ ಸೈಬರ್ ದಾಳಿ ತಂಡ ಭಾಗಿಯಾಗಿದೆ ಎನ್ನಲಾಗಿದೆ. ಇರಾನ್‌ನ ಪರಮಾಣು ಘಟಕಕ್ಕೆ ಸಂಬಂಧಿಸಿದ ಕಾರ್ಯಚಟುವಟಕೆಗಳನ್ನು ಹಲವು ವರ್ಷಗಳಿಂದ ಇಸ್ರೇಲ್ ಖಂಡಿಸುತ್ತಲೇ ಬಂದಿದೆ. ಅಲ್ಲದೆ ಇದಕ್ಕೂ ಮುನ್ನ ಇರಾನ್‌ನ ಪರಮಾಣು ಘಟಕದ ಮೇಲೆ ಇಸ್ರೇಲಿ ಪಡೆಗಳು ಸೈಬರ್ ದಾಳಿ ನಡೆಸಿದ್ದವು. ಅಲ್ಲದೆ ೨೦೧೮ರಲ್ಲಿ ಟ್ರಂಪ್ ಆಡಳಿತಾವಧಿಯಲ್ಲಿ ತಡೆ ಹಿಡಿಯಲಾಗಿದ್ದ ೨೦೧೫ರ ಇರಾನ್ ಪರಮಾಣು ಒಪ್ಪಂದ ಇದೀಗ ಮತ್ತೆ ಆರಂಭವಾದ ನಂತರ ಇದೇ ಮೊದಲ ಬಾರಿಗೆ ದಾಳಿ ನಡೆದಿದೆ ಎನ್ನಲಾಗಿದೆ. ಶನಿವಾರ ನತಾನ್ಝ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಸೆಂಟ್ರಿಫ್ಯೂಜ್‌ಗಳನ್ನು ಇರಾನ್‌ನ ಅಧ್ಯಕ್ಷ ಹಸನ್ ರೌಹಾನಿಯವರು ಉದ್ಘಾಟಿಸಿದ್ದರು. ಇದೀಗ ಅದೇ ಘಟಕದ ಮೇಲೆ ಸೈಬರ್ ದಾಳಿ ನಡೆದಿದೆ.