ಇರಾನ್‌ನಲ್ಲಿ ಬಾಲಕಿಯರ ಶಿಕ್ಷಣಕ್ಕೆ ಕಡಿವಾಣ

ತೆಹ್ರಾನ್ (ಇರಾನ್), ಮಾ.೨- ಹಿಜಾಬ್ ವಿರುದ್ಧದ ಪ್ರತಿಭಟನೆಯಲ್ಲಿ ನಲುಗಿದ್ದ ಇರಾನ್‌ನಲ್ಲಿ ಇದೀಗ ಮತ್ತೊಮ್ಮೆ ಇದೇ ರೀತಿಯ ಹೋರಾಟ ಆರಂಭವಾಗುವ ಲಕ್ಷಣ ಗೋಚರಿಸಿದೆ. ಬಾಲಕಿಯರ ಶಿಕ್ಷಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇರಾನ್‌ನ ಹಲವೆಡೆ ಬಾಲಕಿಯರ ಶಾಲೆಗಳಲ್ಲಿ ವಿಷಪ್ರಾಷಣ ಹಾಗೂ ವಿಷಾನಿಲಗಳ ಮೂಲಕ ಬೆದರಿಕೆ ಒಡ್ಡುವ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವ ಆರೋಪ ವ್ಯಕ್ತವಾಗಿದ್ದು, ಆತಂಕ ಮೂಡಿಸಿದೆ.
ಬಾಲಕಿಯರ ಶಾಲೆಗಳಲ್ಲಿ ನೀರಿನ ಟ್ಯಾಂಕ್‌ಗಳಲ್ಲಿ ವಿಷಪ್ರಾಷಣಗೈಯ್ಯುವ ಮೂಲಕ ವಿದ್ಯಾರ್ಥಿಗಳಲ್ಲಿ ಭಯ ಮೂಡಿಸಿ, ಶಾಲೆಗಳಿಗೆ ತೆರಳದಂತೆ ನೋಡಿಕೊಳ್ಳಲಾಗುತ್ತಿದೆ. ಅದೂ ಅಲ್ಲದೆ ಹಲವೆಡೆ ವಿಷಾನಿಲ ಪ್ರಯೋಗಿಸುವ ಮೂಲಕ ಬಾಲಕಿಯರಲ್ಲಿ ಭಯ ಮೂಡಿಸಲಾಗುತ್ತಿದೆ. ಈ ಮೂಲಕ ಬಾಲಕಿಯರನ್ನು ಶಾಲೆಗಳಿಂದ ದೂರವಿಡುವ ಪ್ರಯತ್ನವನ್ನು ಒಂದು ವರ್ಗಕ್ಕೆ ಮಾಡುತ್ತಿದೆ. ಇಲ್ಲಿಯ ತನಕ ಅಫ್ಘಾನಿಸ್ತಾನಗಳಲ್ಲಿ ಕಂಡು ಬರುತ್ತಿದ್ದ ಇಂಥ ಪ್ರಕರಣಗಳು ಇದೀಗ ಇರಾನ್‌ನಲ್ಲೂ ನಡೆಯುತ್ತಿರುವುದು ಸಹಜವಾಗಿಯೇ ಜಾಗತಿಕವಾಗಿ ಹಲವು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಸುಮಾರು ೨೬ಕ್ಕೂ ಹೆಚ್ಚಿನ ಶಾಲೆಗಳಲ್ಲಿ ಈ ರೀತಿಯ ವಿಲಕ್ಷಣ ಸಂಗತಿಗಳು ಬೆಳಕಿಗೆ ಬಂದಿದ್ದು, ೧೨ಕ್ಕೂ ಹೆಚ್ಚಿನ ಬಾಲಕಿಯರು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಕಳೆದ ನವೆಂಬರ್‌ನಿಂದಲೇ ಇಂಥ ಪ್ರಕರಣಗಳು ನಡೆಯುತ್ತಿದ್ದು, ಇಲ್ಲಿಯ ವರೆಗೆ ಸುಮಾರು ಬರೋಬ್ಬರಿ ೧೦೦೦ಕ್ಕೂ ಅಧಿಕ ಬಾಲಕಿಯರು ಅಸ್ವಸ್ಥತೆ ಹೊಂದಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಇತ್ತೀಚಿಗೆ ನಡೆದ ಹಿಜಾಬ್ ವಿರೋಧಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಇದೀಗ ಬಾಲಕಿಯರ ಮೇಲೆ ದಂಡ ಪ್ರಯೋಗ ಮಾಡಲಾಗುತ್ತಿದೆ ಎಂಬ ಆರೋಪ ಕೂಡ ವ್ಯಕ್ತವಾಗಿದೆ. ಸದ್ಯ ಇರಾನ್‌ನ ಐದು ನಗರಗಳ ೨೬ ಶಾಲಗಳಲ್ಲಿ ವಿಷಾನಿಲ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ರೀತಿಯ ದುರಂತಗಳು ಇತರೆಡೆಗಳಲ್ಲೂ ಹರಡುತ್ತಿದೆ ಎನ್ನಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಫಾರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿತ್ತು. ಆದರೆ ಈ ವರದಿಯನ್ನು ಅಲ್ಲಿನ ಆಂತರಿಕ ಸಚಿವ ಅಹ್ಮದ್ ವಹಿದಿ ತಳ್ಳಿಹಾಕಿದ್ದು, ವಿದೇಶಿ ಮೂಲದ ಮತ್ತು ಬಾಡಿಗೆ ಗುಂಪುಗಳು ಇರಾನ್‌ನ ಜನರ ಮೇಲೆ ಮಾನಸಿಕ ಯುದ್ಧ ನಡೆಸುತ್ತಿದೆ. ಅಲ್ಲದೆ ಪರಿಸ್ಥಿತಿಯ ಲಾಭ ಪಡೆಯುತ್ತಿದೆ ಎಂದು ಅವರು ಆರೋಪಿಸಿದರು.