ಇರಾನ್‌ಗೆ ಸಂದೇಶ ಅಮೆರಿಕಾ ರವಾನೆ

ತೆಹ್ರಾನ್ (ಇರಾನ್), ಜ.೧೪- ಕೆಂಪು ಸಮುದ್ರದಲ್ಲಿ ಸರಕು ಸಾಗಾಟ ಹಡಗುಗಳ ಮೇಲೆ ದಾಳಿ ನಡೆಸುತ್ತಿರುವ ಇರಾನ್ ಬೆಂಬಲಿತ ಹೌಥಿ ಉಗ್ರ ಸಂಘಟನೆಯ ವಿರುದ್ಧ ಈಗಾಗಲೇ ಅಮೆರಿಕಾ ಹಾಗೂ ಬ್ರಿಟನ್ ವೈಮಾನಿಕ ದಾಳಿ ಸಂಘಟಿಸಿದೆ. ಈ ನಡುವೆ ಇದೀಗ ಇರಾನ್‌ಗೆ ಅಮೆರಿಕಾವು ಖಾಸಗಿ ಸಂದೇಶವನ್ನು ಕಳುಹಿಸಿದ್ದು, ಭಾರೀ ಕುತೂಹಲ ಮೂಡಿಸಿದೆ.
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿ, ಇರಾನ್ ಬೆಂಬಲಿತ ಹೌಥಿ ಉಗ್ರರು ಕೆಂಪು ಸಮುದ್ರದಲ್ಲಿ ಸರಕು ಸಾಗಾಟ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಸದ್ಯ ಕೆಂಪು ಸಮುದ್ರದಲ್ಲಿ ಸರಕು ಸಾಗಾಟ ಹಡಗುಗಳ ಸಾಗಾಟದಲ್ಲಿ ಕೊಂಚ ಕಡಿಮೆಯಾಗಿದ್ದು, ಜಾಗತಿಕ ಪೂರೈಕೆ ವ್ಯವಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯೆಮೆನ್‌ನಲ್ಲಿರುವ ಹೌಥಿ ಉಗ್ರರ ಹಲವು ನೆಲೆಗಳ ಮೇಲೆ ಅಮೆರಿಕಾ ಹಾಗೂ ಬ್ರಿಟನ್ ವಾಯುದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕಾ ವಿರುದ್ಧ ಕಠಿಣ ಕ್ರಮದ ಬೆದರಿಕೆಯನ್ನು ಕೂಡ ಹೌತಿ ಪಡೆ ನೀಡಿದೆ. ಈ ನಡುವೆ ಹೌಥಿ ಉಗ್ರರಿಗೆ ತೆರೆಮರೆಯಲ್ಲಿ ಎಲ್ಲಾ ರೀತಿಯ ನೆರವು ನೀಡುತ್ತಿರುವ ಇರಾನ್‌ಗೆ ಅಮೆರಿಕಾ ಖಾಸಗಿ ಸಂದೇಶವೊಂದನ್ನು ಕಳುಹಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ?ಯುದ್ದಕ್ಕೆ ನಾವು ಚೆನ್ನಾಗಿಯೇ ಸಿದ್ಧವಾಗಿದ್ದೇವೆ ಎಂಬುದಕ್ಕೆ ನಮಗೆ ವಿಶ್ವಾಸವಿದೆ? ಎಂಬ ಸಂದೇಶ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಸಂದೇಶದ ಬಗ್ಗೆ ಇನ್ನಷ್ಟು ಮಾಹಿತಿ ನೀಡಲು ಬೈಡೆನ್ ನಿರಾಕರಿಸಿದ್ದಾರೆ. ಅಮೆರಿಕಾ ಹಾಗೂ ಇರಾನ್ ಬದ್ದವೈರಿಗಳಾಗಿದ್ದು, ಒಬ್ಬರು ಮತ್ತೊಬ್ಬರ ದೇಶದಲ್ಲಿ ರಾಜತಾಂತ್ರಿಕರನ್ನು ಕೂಡ ನಿಯೋಜನೆ ಮಾಡಿಲ್ಲ. ಆದರೆ ಅಮೆರಿಕಾ ಸೇರಿದಂತೆ ಮಿತ್ರರಾಷ್ಟ್ರಗಳ ಆರೋಪವನ್ನು ಇರಾನ್ ನಿರಾಕರಿಸಿದ್ದು, ಇದರಲ್ಲಿ ನಾವು ಭಾಗಿಯಾಗಿಲ್ಲ ಎಂದಷ್ಟೇ ತಿಳಿಸಿದೆ. ಇನ್ನು ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಬೆಂಬಲದೊಂದಿಗೆ ಶುಕ್ರವಾರ ಮುಂಜಾನೆ ಸುಮಾರು ೩೦ ಹೌತಿ ಸ್ಥಾನಗಳ ಮೇಲೆ ಜಂಟಿ ಯುಕೆ-ಯುಎಸ್ ವೈಮಾನಿಕ ವೈಮಾನಿಕ ದಾಳಿಗಳನ್ನು ನಡೆಸಿದೆ. ಅಲ್ಲದೆ ದಾಳಿ ಸ್ಪಷ್ಟನೆ ರೀತಿಯಲ್ಲಿ ಹೇಳಿಕೆ ನೀಡಿರುವ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಕ್ಯಾಮರೂನ್, ?ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ಯೆಮೆನ್‌ನಲ್ಲಿ ಹೌತಿಗಳ ವಿರುದ್ಧ ಮಿಲಿಟರಿ ಕ್ರಮವನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಬ್ರಿಟನ್‌ಗೆ ಯಾವುದೇ ಆಯ್ಕೆ ಇಲ್ಲ ಎಂದು ತಿಳಿಸಿದ್ದಾರೆ.