ಇರಾಕ್‌ಗೆ ಬ್ಲಿಂಕೆನ್ ಭೇಟಿ

ಬಾಗ್ದಾದ್, ನ.೬- ಒಂದೆಡೆ ಹಮಾಸ್ ಹಾಗೂ ಇಸ್ರೇಲ್ ನಡುವೆ ಯುದ್ದ ಭೀಕರಗೊಳ್ಳುತ್ತಿದ್ದಂತೆ ಮತ್ತೊಂದೆಡೆ ಅಮೆರಿಕದ ರಾಜ್ಯ ಕಾರ್ಯದರ್ಶಿ (ವಿದೇಶಾಂಗ ಸಚಿವ) ಆಂಟೋನಿ ಬ್ಲಿಂಕೆನ್ ಅವರು ಇದೀಗ ಇರಾಕ್‌ಗೆ ಅನಿರೀಕ್ಷಿತ ಭೇಟಿ ನೀಡಿದ್ದು, ಪರಿಸ್ಥಿತಿಯ ಬಗ್ಗೆ ಅಲ್ಲಿನ ಪ್ರಧಾನಿ ಮುಹಮ್ಮದ್ ಅಲ್ ಸುಡಾನಿ ಜೊತೆ ಚರ್ಚೆ ನಡೆಸಿದ್ದಾರೆ. ವಿದೇಶಾಂಗ ಕಾರ್ಯದರ್ಶಿಯಾಗಿ ಬ್ಲಿಂಕೆನ್ ಅವರ ಇದು ಮೊದಲ ಇರಾಕ್ ಭೇಟಿಯಾಗಿದೆ.
ಇದಕ್ಕೂ ಮುನ್ನ ಬ್ಲಿಂಕೆನ್ ಅವರು ಪಶ್ಚಿಮ ದಂಡೆ ನಗರವಾದ ರಮಲ್ಹಾದಲ್ಲಿ ಫೆಲಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮೊಹ್ಮದ್ ಅಬ್ಬಾಸ್ ಅವರನ್ನು ಭೇಟಿ ಮಾಡಲು ಇಸ್ರೇಲಿ ತಪಾಸಣಾ ಕೇಂದ್ರದ ಮೂಲಕ ಹಾದು ಹೋದರು. ಅಕ್ಟೋಬರ್ ೭ರ ಇಸ್ರೇಲ್ ಮೇಲಿನ ದಾಳಿಯ ಬಳಿಕ ಬ್ಲಿಂಕೆನ್ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ. ಇನ್ನು ಕೂಡಲೇ ಇರಾಕ್‌ಗೆ ಭೇಟಿಯ ಹಿನ್ನೆಲೆಯಲ್ಲಿ ಬಾಗ್ದಾದ್‌ಗೆ ಆಗಮಿಸಿ, ಪ್ರಧಾನಿ ಸುಡಾನಿ ಜೊತೆ ಮಾತುಕತೆ ಬಳಿಕ ಮಾತನಾಡಿದ ಬ್ಲಿಂಕೆನ್, ಗಾಝಾ ಕದನ ಇತರೆ ಪ್ರದೇಶಗಳಿಗೆ ಹರಡದಂತೆ ಅಮೆರಿಕಾ ಮುಖ್ಯ ಕ್ರಮ ತೆಗೆದುಕೊಳ್ಳುತ್ತಿದೆ. ಇರಾಕ್ ಸರ್ಕಾರದ ಜೊತೆ ಉತ್ತಮ, ಪ್ರಾಮಾಣಿಕ ಸಂಭಾಷಣೆ ನಡೆಸಲಾಗಿದೆ. ಗಾಜಾದಲ್ಲಿ ಮಾನವೀಯ ವಿರಾಮವನ್ನು ಪಡೆಯಲು ಅಮೆರಿಕಾ ಅಧಿಕಾರಿಗಳು ಶ್ರಮ ಪಡುತ್ತಿದ್ದಾರೆ. ಮುತ್ತಿಗೆ ಹಾಕಲಾದ ಗಾಝಾ ಕರಾವಳಿಗೆ ಸದ್ಯ ೧೦೦ ಟ್ರಕ್‌ಗಳ ನೆರವಿನ ಸಾಮಾಗ್ರಿ ಒದಗಿಸಲಾಗುತ್ತಿದ್ದು, ಆದರೆ ಇದು ಸಾಕಾಗುತ್ತಿಲ್ಲ. ಅಮೆರಿಕಾವು ಪ್ರಾದೇಶಿಕ ಸಂಘರ್ಷವನ್ನು ತಡೆಯಲು ಬಯಸಿದೆ. ಇಸ್ರೇಲ್ ಕೃತ್ಯದಿಂದ ಆಕ್ರೋಶಗೊಂಡ ದೇಶಗಳ ಜೊತೆ ರಾಜತಾಂತ್ರಿಕ ಮಾತುಕತೆಯನ್ನು ಹೆಚ್ಚಿಸಲಾಗಿದೆ. ಈಗಾಗಲೇ ೯೭೭೦ ಮಂದಿಯನ್ನು ಇಸ್ರೇಲಿ ಪಡೆಗಳು ಹತ್ಯೆ ಮಾಡಿವೆ. ಇಸ್ರೇಲ್ ತಕ್ಷಣ ಕದನ ವಿರಾಮ ಘೋಷಿಸಬೇಕು ಎಂಬ ಅಮೆರಿಕದ ನಿಲುವನ್ನು ಬ್ಲಿಂಕೆನ್ ಪುನರುಚ್ಛರಿಸಿದ್ದಾರೆ. ಮಾನವೀಯ ನೆರವಿಗಾಗಿ ಮನವಿ ಮಾಡುವುದು ಒಂದು ಪ್ರಕ್ರಿಯೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಮತ್ತು ವಿವರಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.