ಇಯು-ಕತಾರ್‌ಗೇಟ್ ಲಂಚ ಪ್ರಕರಣ: ಪಂಝೆರಿ ಬಂಧನ

ಲಂಡನ್,ಜ.೧೮-ಯುರೋಪಿಯನ್ ಯೂನಿಯನ್ (ಇಯು) ಹಾಗೂ ಕತಾರ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಟಲಿ ಮೂಲದ, ಇಯು ಮಾಜಿ ಸದಸ್ಯ ಪೈರ್ ಅಂಟಾನಿಯೊ ಪಂಝೆರಿ ಎಂಬಾತನನ್ನು ಬಂಧಿಸಲಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ನಾಲ್ವರ ವಿರುದ್ಧ ಆರೋಪ ಹೊರಿಸಲಾಗಿದೆ.


ಇಯು ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿರುವ ಕ್ರಿಮಿನಲ್ ನೆಟ್‌ವರ್ಕ್‌ನ ಆಪಾದಿತ ನಾಯಕ ಪಂಝೆರಿ ಇದೀಗ ಪ್ರಕರಣದಲ್ಲಿ ಯಾವ ದೇಶಗಳು ಭಾಗಿಯಾಗಿವೆ ಹಾಗೂ ಯಾವ ರೀತಿಯಲ್ಲಿ ಅದು ಕಾರ್ಯನಿರ್ವಹಿಸಿತು ಎಂಬುದನ್ನು ಬಹಿರಂಗಪಡಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸಹಜವಾಗಿಯೇ ಇದರಿಂದ ಪ್ರಕರಣಕ್ಕೆ ಮತ್ತೊಂದು ಪ್ರಮುಖ ತಿರುವು ಲಭಿಸಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಲ್ಜಿಯಂನಲ್ಲಿ ಬಂಧನಕ್ಕೀಡಾದ ನಾಲ್ವರಲ್ಲಿ ಪಂಝೆರಿ ಕೂಡ ಒಬ್ಬರಾಗಿದ್ದಾರೆ. ಅತ್ತ ಕತಾರ್ ತಾನು ಉಡುಗೊರೆ ಮತ್ತು ಹಣದ ಮೂಲಕ ಫುಟ್ಬಾಲ್ ವಿಶ್ವಕಪ್‌ನಲ್ಲಿ ಪ್ರಭಾವವನ್ನು ಪಡೆಯಲು ಪ್ರಯತ್ನಿಸಿದೆ ಎಂಬ ಆರೋಪವನ್ನು ಬಲವಾಗಿ ನಿರಾಕರಿಸಿದೆ. ಅಲ್ಲದೆ ಮೊರಾಕ್ಕೊ ಮೀನುಗಾರಿಕೆ ಹಕ್ಕುಗಳು ಮತ್ತು ಪಶ್ಚಿಮ ಸಹಾರಾದ ವಿವಾದಿತ ಸ್ಥಾನಮಾನದಂತಹ ವಿಷಯಗಳ ಮೇಲೆ ಪ್ರಭಾವವನ್ನು ಬಯಸಿದೆ ಎಂಬ ಆರೋಪವನ್ನು ಕೂಡ ಬಲವಾಗಿ ತಿರಸ್ಕರಿಸಿದೆ. ಕಳೆದ ತಿಂಗಳು ಫ್ಲ್ಯಾಟ್, ಮನೆ ಮತ್ತು ಹೋಟೆಲ್‌ಗಳ ಮೇಲೆ ಸರಣಿ ದಾಳಿಯ ಸಮಯದಲ್ಲಿ ಪೊಲೀಸರು ಸುಮಾರು ೧.೫ ಮಿಲಿಯನ್ ಯುರೋ ನಗದನ್ನು ವಶಪಡಿಸಿಕೊಂಡಿದ್ದು, ನಂತರ ನಾಲ್ಕು ಶಂಕಿತರ ಮೇಲೆ ಆರೋಪ ಹೊರಿಸಲಾಗಿದೆ. ಅಲ್ಲದೆ ಹೋಟೆಲ್‌ನಲ್ಲಿ ನಗದು ತುಂಬಿದ ಸೂಟ್‌ಕೇಸ್ ಸೇರಿದಂತೆ ೨೦೦ ಯುರೊ, ೫೦ ಯುರೊ, ೨೦ ಯುರೊ ಮತ್ತು ೧೦ ಯುರೊ ಮುಖಬೆಲೆಯ ನೋಟುಗಳ ಚಿತ್ರಗಳನ್ನು ಕೂಡ ಪೊಲೀಸರು ನಂತರ ಬಿಡುಗಡೆ ಮಾಡಿದ್ದರು. ಇನ್ನು ಇತರೆ ಶಂಕಿತರಲ್ಲಿ ಯುರೋಪಿಯನ್ ಪಾರ್ಲಿಮೆಂಟ್‌ನ ಸಂಸದೆ ಇವಾ ಕೈಲಿ, ಆಕೆಯ ಸಹವರ್ತಿ ಫ್ರಾನ್ಸೆಸ್ಕೊ ಜಿಯೊರ್ಗಿ ಮತ್ತು ಲಾಬಿಸ್ಟ್ ನಿಕೊಲೊ ಫಿಗ್-ತಲಮಾಂಕಾ ಕೂಡ ಸೇರಿದ್ದಾರೆ. ಕೈಲಿ ಅವರು ಯುರೋಪಿಯನ್ ಸಂಸತ್ತಿನ ೧೪ ಉಪಾಧ್ಯಕ್ಷೆಯರಲ್ಲಿ ಒಬ್ಬರಾಗಿದ್ದು, ಆರೋಪ ಕೇಳಿ ಬಂದ ಬಳಿಕ ಸ್ಥಾನವನ್ನು ತ್ಯಜಿಸಿದ್ದರು. ಈಕೆಯ ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿನ ಫ್ಲ್ಯಾಟ್‌ನಲ್ಲಿ ಕಳೆದ ತಿಂಗಳು ಬರೊಬ್ಬರಿ ೧.೫೦ ಲಕ್ಷ ಯುರೋ ನಗದು ಹಣ ಪತ್ತೆಯಾಗಿದೆ ಎನ್ನಲಾಗಿದೆ. ಆದರೆ ಈ ಆರೋಪವನ್ನು ಆಕೆಯ ವಕೀಲರು ತಳ್ಳಿಹಾಕಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರು ಮನೆ, ಫ್ಲ್ಯಾಟ್‌ಗಳಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾಗಿದೆ ಎನ್ನಲಾಗಿದೆ.


ಏನಿದು ಇಯು-ಕತಾರ್ ಲಂಚ ಪ್ರಕರಣ?
ಕತಾರ್‌ಗೆ ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯ ಲಭಿಸುವ ವಿಚಾರದಲ್ಲಿ ಯುರೋಪಿಯನ್ ಸಂಸತ್ತಿನ ಕೆಲವರು ಲಂಚ ಪಡೆದುಕೊಂಡಿದ್ದರು ಎಂದು ಆರೋಪಿಸಲಾಗಿದೆ. ಆದರೆ ಪ್ರಕರಣದಲ್ಲಿ ಕತಾರ್ ಅನ್ನು ಪ್ರಾಸಿಕ್ಯೂಟಿಂಗ್ ಅಧಿಕಾರಿಗಳು ಅಧಿಕೃತವಾಗಿ ಹೆಸರಿಸಿಲ್ಲ. ಬದಲಾಗಿ ಅವರು ಆರಂಭದಲ್ಲಿ ಗಲ್ಫ್‌ನ ಒಂದು ದೇಶ ಎಂದಷ್ಟೇ ಉಲ್ಲೇಖಿಸಿದ್ದಾರೆ. ಆದಾಗ್ಯೂ, ಕತಾರ್‌ಗೇಟ್ ಎಂಬ ಪದವನ್ನು ಯುರೋಪಿಯನ್ ಪಾರ್ಲಿಮೆಂಟ್‌ನ ಸದಸ್ಯರು ವ್ಯಾಪಕವಾಗಿ ಬಳಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಇದೇ ಹೆಸರಿನಿಂದ ಇದನ್ನು ಗುರುತಿಸಲಾಗುತ್ತಿದೆ.