ಇಮ್ರಾನ್ ಬಿಡುಗಡೆಗೆ ಸುಪ್ರೀಂ ಆದೇಶ

ಇಸ್ಲಾಮಾಬಾದ್, ಮೇ ೧೨- ಪಾಕಿಸ್ತಾನ ಉನ್ನತ ಭ್ರಷ್ಟಾಚಾರ ನಿಗ್ರಹ ಘಟಕವು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಖಾನ್‌ರನ್ನು ಬಂಧಿಸಿರುವುದು ಕಾನೂನುಬಾಹಿರವಾಗಿದ್ದು, ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪಾಕಿಸ್ತಾನದ ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ. ಆದೇಶ ಹಿನ್ನೆಲೆಯಲ್ಲಿ ಸದ್ಯ ಇಮ್ರಾನ್ ಖಾನ್ ಸುಪ್ರೀಂ ಕೋರ್ಟ್‌ನ ರಕ್ಷಣೆಯಲ್ಲಿದ್ದಾರೆ.
ಇಸ್ಲಾಮಾಬಾದ್‌ನ ನ್ಯಾಯಾಲಯದ ಆವರಣದಿಂದ ಇಮ್ರಾನ್ ಖಾನ್‌ರನ್ನು ಬಂಧಿಸಿರುವುದು ಕಾನೂನುಬಾಹಿರ ಎಂದು ಅವರ ವಕೀಲರು ಕೋರ್ಟ್‌ನಲ್ಲಿ ವಾದಿಸಿದ್ದರು. ಅಂತಿಮವಾಗಿ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಯು, ಇಮ್ರಾನ್ ಬಿಡುಗಡೆಗೆ ಆದೇಶಿಸಿದ್ದಾರೆ. ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಇಮ್ರಾನ್ ಖಾನ್ ಬೆಂಬಲಿಗರು ತನ್ನ ನಾಯಕನ ಬಂಧನವನ್ನು ಖಂಡಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿರುವಾಗಲೇ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ. ಇನ್ನು ಇಮ್ರಾನ್ ಖಾನ್ ಬಂಧನವನ್ನು ಖಂಡಿಸಿ ತೆಹ್ರೀಕ್ ಎ ಇನ್ಸಾಫ್ ಕಾರ್ಯಕರ್ತರು ಇಡೀ ದೇಶದಲ್ಲೇ ದಾಂಧಲೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ಅದರಲ್ಲೂ ಮುಖ್ಯವಾಗಿ ಮಿಲಿಟರಿ ಕೇಂದ್ರಗಳ ಮೇಲೆ ಕೂಡ ದಾಳಿ ನಡೆಸಿದ್ದು, ಜಾಗತಿಕ ಮಟ್ಟದಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಸಹಜವಾಗಿಯೇ ಒಂದು ವೇಳೆ ಇಮ್ರಾನ್ ಬಂಧನ ಪ್ರಕ್ರಿಯೆ ಮುಂದುವರೆಯುತ್ತಿದ್ದರೆ ಖಾನ್ ಪಕ್ಷದ ಕಾರ್ಯಕರ್ತರ ಆಕ್ರೋಶ ಮತ್ತಷ್ಟು ತೀವ್ರಗೊಂಡು, ಭಾರೀ ಹಿಂಸಾಚಾರ ನಡೆಯುವ ಸಾಧ್ಯತೆ ಇತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಉನ್ನತ ನ್ಯಾಯಾಧೀಶರ ಆದೇಶದ ಮೇರೆಗೆ ಇಮ್ರಾನ್ ಖಾನ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಕೋರ್ಟ್ ವಿಚಾರಣೆಗೆ ಇಮ್ರಾನ್ ಹಾಜರಾದಾಗ ಇಡೀ ಮಾಧ್ಯಮ ಸಿಬ್ಬಂದಿ ಅವರನ್ನು ಸುತ್ತುವರಿದಿದ್ದರು. ಆದರೆ ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಇಮ್ರಾನ್ ಉತ್ತರಿಸದೇ ಸೀದಾ ವಿಚಾರಣೆಗೆ ಹಾಜರಾದರು. ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ವಿಚಾರಣೆಯಲ್ಲಿ ಕೊನೆಗೂ ಇಮ್ರಾನ್‌ಗೆ ನಿರಾಳತೆ ಕಂಡಿದ್ದಾರೆ. ವಿಚಾರಣೆ ವೇಳೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಉಮರ್ ಅಟಾ ಬಂಡಿಯಲ್, ನಿಮ್ಮ ಬಂಧನವು ಅಸಿಂಧುವಾಗಿದೆ ಆದ್ದರಿಂದ ಇಡೀ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಕೋಲಿನಿಂದ ಹಲ್ಲೆ
ಕೋರ್ಟ್ ವಿಚಾರಣೆಯ ವೇಳೆ ಪ್ರತಿಕ್ರಿಯೆ ನೀಡಿರುವ ಇಮ್ರಾನ್ ಖಾನ್, ಬಯೋಮೆಟ್ರಿಕ್ ಪರೀಕ್ಷೆಗೆ ಬಂದಿದ್ದ ವೇಳೆ ಹೈಕೋರ್ಟ್‌ನಿಂದ ನನ್ನನ್ನು ಅಪಹರಿಸಲಾಗಿತ್ತು. ಅಪಹರಣ ವೇಳೆ ನನಗೆ ಕೋಲುಗಳಿಂದ ಹಲ್ಲೆ ನಡೆಸಲಾಗಿದ್ದು, ಇತರರೊಂದಿಗೆ ಇದಕ್ಕಿಂತಲೂ ಕೆಟ್ಟದಾಗಿ ನಡೆದುಕೊಳ್ಳಲಾಗಿತ್ತು ಎಂದು ಆರೋಪಿಸಿದ್ದಾರೆ. ಈ ಹೇಳಿಕೆಗೆ ವೇಳೆ ಭದ್ರತಾ ಅಧಿಕಾರಿಗಳು ಯಾವುದೇ ತಕ್ಷಣದ ಹೇಳಿಕೆ ನೀಡಿರಲಿಲ್ಲ.