ಇಮ್ರಾನ್ ಜಾಮೀನು ಅವಧಿ ವಿಸ್ತರಣೆ

ಇಸ್ಲಾಮಾಬಾದ್, ಜೂ.೨೦- ಕಾದಿರ್ ಟ್ರಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಅಧ್ಯಕ್ಷ ಕೂಡ ಆಗಿರುವ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಷ್ರಾ ಬೀಬಿಗೆ ನೀಡಿರುವ ಜಾಮೀನು ಅವಧಿಯನ್ನು ಜುಲೈ ೪ರವರೆಗೆ ವಿಸ್ತರಿಸಲಾಗಿದೆ.
ಒಂದು ವೇಳೆ ನನಗೆ ಪ್ರಕರಣದಲ್ಲಿ ಜಾಮೀನು ನೀಡದೆ, ಮತ್ತೆ ಬಂಧಿಸಿದರೆ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುವಂತೆ ಇಮ್ರಾನ್ ಸಲಹೆ ನೀಡಿದ್ದರು. ಆದರೆ ಇದೀಗ ಇಮ್ರಾನ್ ಜಾಮೀನು ಅವಧಿಯನ್ನು ಜುಲೈ ೪ರ ವರೆಗೆ ವಿಸ್ತರಿಸಲಾಗಿದೆ. ಜಾಮೀನು ಅವಧಿಯನ್ನು ವಿಸ್ತರಿಸಿ ‘ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೊ’(ಎನ್‌ಎಬಿ) ಆದೇಶ ಜಾರಿಗೊಳಿಸಿದೆ. ಇದೇ ಸಂದರ್ಭ, ಇಮ್ರಾನ್ ವಿರುದ್ಧ ಇತರ ಮೂರು ನ್ಯಾಯಾಲಯಗಳಲ್ಲಿ ದಾಖಲಾಗಿರುವ ೧೫ ಪ್ರಕರಣಗಳಲ್ಲಿಯೂ ಜಾಮೀನು ದೊರಕಿದೆ ಎಂದು ಅವರ ಕಾನೂನು ಸಲಹೆಗಾರರ ತಂಡದ ಸದಸ್ಯ ಗೋಹರ್ ಖಾನ್ ಹೇಳಿದ್ದಾರೆ. ಕೆಲ ವಾರಗಳ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಇಮ್ರಾನ್ ಖಾನ್‌ಗೆ ಸುಪ್ರೀಂ ಕೋರ್ಟ್ ಕೊಂಚ ರಿಲೀಫ್ ನೀಡಿತ್ತು. ಆದರೆ ಮುಂದಿನ ಅಕ್ಟೋಬರ್‌ನಲ್ಲಿ ನಡೆಯಲಿರುವ ಚುನಾವಣೆಗಳ ಹಿನ್ನೆಲೆಯಲ್ಲಿ ಖಾನ್‌ರನ್ನು ಬಂಧಿಸಲು ಸರ್ಕಾರ ಯೋಜಿಸಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಆದಿತ್ಯವಾರ ತಡರಾತ್ರಿ ಪ್ರತಿಕ್ರಿಯೆ ನೀಡಿದ್ದ ಖಾನ್, ನನ್ನನ್ನು ಜೈಲಿಗೆ ಹಾಕಿದಾಗ ಜನರು ಮೂಕ ಪ್ರೇಕ್ಷಕರಾಗಿ ಕುಳಿತುಕೊಳ್ಳುತ್ತಾರೆ ಎಂದು ಅವರು ನಂಬುತ್ತಾರೆ. ಒಂದು ವೇಳೆ ಬಂಧಿಸಿದರೆ ಬೀದಿಗಿಳಿದು ಹೋರಾಟ ನಡೆಸಿ ಎಂದು ಖಾನ್ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದರು.