ಇಮ್ರಾನ್‌ಗೆ ಬಂಧನದ ಭೀತಿ

ಇಸ್ಲಾಮಾಬಾದ್, ಮಾ.೬-ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಹಾಗೂ ತೆಹರೀಕ್ ಇ-ಇನ್ಸಾಫ್ (ಪಿಟಿಐ) ಪಕ್ಷದ ನಾಯಕ ಇಮ್ರಾನ್ ಖಾನ್ ಅವರನ್ನು ತೊಶಖಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸುವ ಸಾಧ್ಯತೆ ಇದೆ.
ಇಲ್ಲಿನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಖಾನ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಅನ್ನು ಫೆಬ್ರುವರಿ ೨೮ರಂದು ಹೊರಡಿಸಿದೆ. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಖಾನ್ ಅವರನ್ನು ಇಂದು ಬಂಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಪಿಟಿಐ ನಾಯಕ ಫವಾದ್ ಚೌಧರಿ, ಇಮ್ರಾನ್ ಖಾನ್ ಅವರನ್ನು ಬಂಧಿಸುವ ಪ್ರಯತ್ನ ಮಾಡಿದರೆ ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಏನಿದು ಪ್ರಕರಣ: ೨೦೧೮ ಮತ್ತು ೨೦೧೯ರ ಅವಧಿಯಲ್ಲಿ ಇಮ್ರಾನ್ ಖಾನ್ ಅವರು ತಮ್ಮ ಬಳಿಯೇ ಇರಿಸಿಕೊಂಡಿದ್ದ ತೊಶಖಾನ ಉಡುಗೊರೆಗಳ ಒಟ್ಟು ಮೌಲ್ಯದ ಕುರಿತ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.
ಪಾಕಿಸ್ತಾನದ ಆಡಳಿತಗಾರರು, ಸಂಸತ್ ಸದಸ್ಯರು, ಅಧಿಕಾರಿಗಳು ಪಡೆಯುವ ಉಡುಗೊರೆಗಳನ್ನು ಸಂಗ್ರಹಿಸಿಡುವ ಇಲಾಖೆಯನ್ನು ತೊಶಖಾನ ಎಂದು ಕರೆಯಲಾಗುತ್ತದೆ. ಇದು ಸಂಸದೀಯ ವಿಭಾಗದ ಆಡಳಿತದ ನಿಯಂತ್ರಣದಲ್ಲಿರುತ್ತದೆ.