ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಖಚಿತ


ಬೆಂಗಳೂರು,ಸೆ.೨೩- ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಜಾತ್ಯಾತೀತ ಜನತಾದಳ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ನವೆಂಬರ್ ತಿಂಗಳಿನಲ್ಲಿ ಅವರು ಜೆಡಿಎಸ್‌ಗೆ ಸೇರಲು ಮುಹೂರ್ತ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜಕೀಯ ವಲಯಗಳಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಮುಖಂಡರು ವಲಸೆ ಬರಲಿದ್ದಾರೆ ಎಂದು ವ್ಯಾಪಕ ಚರ್ಚೆಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಈಗ ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆಗೆ ವೇದಿಕೆ ಸಜ್ಜುಗೊಂಡಿದೆ.
ಈ ಹಿಂದೆ ಇಬ್ರಾಹಿಂ ಅವರು ಜೆಡಿಎಸ್‌ಗೆ ಸೇರಲಿದ್ದಾರೆ ಎಂಬ ಬಗ್ಗೆ ಮಾಹಿತಿ ಅರಿತಾಗ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಇಬ್ರಾಹಿಂ ಅವರನ್ನು ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿ ಅವರ ಮನವೊಲಿಸಿದ್ದರು.
ಆದರೆ, ಇಬ್ರಾಹಿಂ ನಿನ್ನೆ ಬಿಡದಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರ್ಪಡೆ ಕುರಿತು ಮಾತುಕತೆ ಪೂರ್ಣಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್‌ನಲ್ಲಿ ಇಬ್ರಾಹಿಂ ಜೆಡಿಎಸ್ ಸೇರ್ಪಡೆಯಾಗುವುದು ಖಚಿತ ಎಂದು ಹೇಳಲಾಗಿದೆ. ಇಬ್ರಾಹಿಂ ಪಕ್ಷಕ್ಕೆ ಸೇರ್ಪಡೆಯಾದ ನಂತರ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಬಗ್ಗೆಯೂ ಕಾರ್ಯಕ್ರಮಗಳು ನಿಗದಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇಬ್ರಾಹಿಂ ಪಕ್ಷಕ್ಕೆ ಸೇರ್ಪಡೆಯಾದರೆ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ. ಈ ಹಿಂದೆಯೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಭೇಟಿಯಾಗಿ ಇಬ್ರಾಹಿಂ ಮಾತುಕತೆ ನಡೆಸಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡದ ಕಾರಣ ಅಸಮಾಧಾನಗೊಂಡಿರುವ ಅವರು, ಈಗ ಜೆಡಿಎಸ್‌ನತ್ತ ಮುಖ ಮಾಡಲು ಕಾರಣ ಎಂದು ಹೇಳಲಾಗಿದೆ.