ಇಬ್ರಾಹಿಂಸಾಬ್, ವೆಂಕಟೇಶ್ ಕುಮಾರ್ ಕವಿತಾ ಮಿಶ್ರಾಗೆ  ಬಳ್ಳಾರಿ ವಿವಿ ಗೌರವ ಡಾಕ್ಟರೇಟ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.12: ನಗರದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯ ನಾಳೆ ಹಮ್ಮಿಕೊಂಡಿರುವ ತನ್ನ 11 ನೇ ಘಟಿಕೋತ್ಸವದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದಿರುವ ರಾಯಚೂರಿನ  ಕವಿತಾ ಮಿಶ್ರಾ,
ಖ್ಯಾತ ಹಿಂದುಸ್ತಾನಿ ಗಾಯಕ ಪಂಡಿತ್ ಎಂ.ವೆಂಕಟೇಶ್ ಕುಮಾರ್ ಮತ್ತು  ಅಬಕಾರಿ ಉದ್ಯಮದ ಜೊತೆ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಹಿರೇಹಾಳ್ ಇಬ್ರಾಹಿಂ ಸಾಬ್ ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದೆಂದು ವಿವಿಯ ಕುಲಪತಿ ಸಿದ್ದು ಪಿ.ಅಲಗೂರು ತಿಳಿಸಿದ್ದಾರೆ.
ಅವರಿಂದು ವಿವಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಈ ವಿಷಯ ತಿಳಿಸಿದರು.
ಹಿರೇಹಾಳ್ ಇಬ್ರಾಹಿಂ ಸಾಬ್ ಅವರು 1931 ರಲ್ಲಿ ಆಂದ್ರ ಪ್ರದೇಶದ ರಾಯದುರ್ಗಂ ತಾಲೂಕಿನ  ದಂಡಿ ಹೀರೆಹಾಳ್‌ ಗ್ರಾಮದಲ್ಲಿ ಜನಿಸಿದರು.
ಅಬಕಾರಿ ಉದ್ಯಮದ ಜೊತೆ ಅವರು ಸಾಹಿತ್ಯ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಆಪಾರ ಕೊಡುಗೆಯನ್ನು ನೀಡಿರುವ ಇವರು ವಿದ್ಯಾರ್ಥಿ ದೆಸೆಯಿಂದಲೆ ಸ್ವಾತಂತ್ರ್ಯ ಹೋರಾಟಗಾರು ಮತ್ತು ಸಾಹಿತಿಗಳ ಸಂಪರ್ಕಕ್ಕೆ ಬಂದು ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡರು.
ಶಿವಮೊಗ್ಗದಲ್ಲಿ ನಡೆದ 49ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಮತ್ತು ಸಾಂಸ್ಕೃತಿಕ ಸಮಿತಿಯ ನೇತೃತ್ವವನ್ನು ವಹಿಸಿದ್ದರು.
ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ಶಿವಮೊಗ್ಗದಲ್ಲಿ ‘ಜೀವನ ಸಂಜೆ’ ಎಂಬ ವೃದ್ಧಾಶ್ರಮವನ್ನು ಸ್ಥಾಪಿಸಿರುತ್ತಾರೆ. ಮುಸ್ಲಿಂ ಪ್ರವಚನಗಳನ್ನು ಕನ್ನಡಕ್ಕೆ ಅನುವಾದಿಸಿರುವ  ಇಬ್ರಾಹೀಂ ಸಾಬ್ ಅವರು  ಕೋಮು ಸಾಮರಸ್ಯವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ.
 ಎಂ. ವೆಂಕಟೇಶ್‌ ಕುಮಾರ್:
ಇವರು ಹೆಸರಾಂತ ಹಿಂದೂಸ್ತಾನಿ ಗಾಯಕರು.  ಬಳ್ಳಾರಿ ಜಿಲ್ಲೆಯ ಲಕ್ಷ್ಮೀಪುರದಲ್ಲಿ 1953 ರಲ್ಲಿ ಜನಿಸಿ,  ಪಂಡಿತ್‌ ಪುಟ್ಟರಾಜ್ ಗವಾಯಿಗಳ ಮಾರ್ಗದರ್ಶನದಲ್ಲಿ ಸಂಗೀತ ತರಬೇತಿ ಪಡೆದಿದ್ದಾರೆ. ಇವರು ಕರ್ನಾಟಕ ಕಾಲೇಜಿನ ಸಂಗೀತ ವಿಭಾಗದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ದಾಸರ ಪದಗಳು ಹಾಗು ವಚನಗಳ ಗಾಯನದ ಮೂಲಕ ಮನೆಮಾತಾಗಿರುವ ಇವರಿಗೆ.  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ,  ಧಾರವಾಡದಿಂದ ಗೌರವ ಡಾಕ್ಟರೇಟ್ ಪದವಿ, ವಚನ ಸಾಹಿತ್ಯಶ್ರೀ ಪ್ರಶಸ್ತಿ ಮತ್ತು 2016ರಲ್ಲಿ ಭಾರತ ಸರ್ಕಾರವು “ಪದ್ಮ ಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತದೆ.
ಕವಿತಾ ಮಿಶ್ರಾ:
ಇವರು  ಧಾರವಾಡದಲ್ಲಿ 1977 ರಲ್ಲಿ ಜನಿಸಿದರು. ಕೃಷಿ ಮತ್ತು ಕೃಷಿ ಆಧಾರಿತ ಉದ್ಯಮದಲ್ಲಿ ಮಹತ್ತರ ಸಾಧನೆಗೈದು. ಬಹು ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕ ಮತ್ತು ಪರಿಸರ ಸ್ನೇಹಿ ವಿಚಾರಗಳನ್ನು ತಿಳಿದು ಅದನ್ನು ಕಾರ್ಯರೂಪಕ್ಕೆ ತರುವುದರ ಜೊತೆ-ಜೊತೆಗೆ ಹೈನುಗಾರಿಕೆ ಮತ್ತು ಕೃಷಿ ನರ್ಸರಿಯನ್ನು ರಾಯಚೂರು ಜಿಲ್ಲೆಯಲ್ಲಿ ಪ್ರಾರಂಭಿಸಿರುತ್ತಾರೆ. ಸುಸ್ಥಿರ ಕೃಷಿ ಪದ್ಧತಿಯ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿರುವ ಇವರಿಗೆ ಅತ್ಯುತ್ತಮ ರೈತ ಪ್ರಶಸ್ತಿ. ಗೋಲಡ್ ಪ್ರಶಸ್ತಿ, ತೋಟಗಾರಿಕಾ ಪ್ರಶಸ್ತಿ, ಕೃಷಿ-ಋಷಿ ಪ್ರಶಸ್ತಿ, ರಾಣಿ ಚನ್ನಮ್ಮ ಪ್ರಶಸ್ತಿಯ ಜೊತೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ.