ಇಬ್ರಾಹಿಂಪುರ ರೇಲ್ವೆ ಮೇಲ್ಸೇತುವೆ ಕಾಮಗಾರಿನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ವಿಜಯಪುರ:ನ.3: ನಗರದಲ್ಲಿ ನಡೆಯುತ್ತಿರುವ ಇಬ್ರಾಹಿಂಪೂರ ರೇಲ್ವೇಗೇಟ್ ಮೇಲ್ಸೇತುವೆ ಕಾಮಗಾರಿಯನ್ನು ನವೆಂಬರ್ ತಿಂಗಳಾಂತ್ಯದಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬುಧವಾರ ನಗರದ ಇಬ್ರಾಹಿಂಪುರ ರೇಲ್ವೆ ಗೇಟ್ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, 36ಮೀಟರ್ ಸ್ಪ್ಯಾನ್, ಬೊಸ್ಟರಿಂಗ್ ಸ್ಟೀಲ್ ಗ್ರೈಡರ್, ಮೂವಮೇಂಟ್, ಪ್ಲೇಸಮೆಂಟ್ ಆನ್ ಬೇರಿಂಗ್ಸ್, ಮೇಲ್ಗಡೆ ಎರಡು ಬದಿಯಲ್ಲಿ ಕಾಂಕ್ರೀಟ್ ಹಾಕುವುದು (ಕಾಂಕ್ರಿಟಿಂಗ್ ಆನ್ ಗರ್ಡರ್), ಪಾದಚಾರಿ ಮಾರ್ಗ, ಮ್ಯಾಟಿಕ್ ಆಸ್ಪಾಟಿಂಗ್, ಗಣೇಶನಗರ ಹಾಗೂ ನಗರ (ಬಿಡಿಎ) ಕಡೆಯಿಂದ ಇಬ್ರಾಹಿಂಪುರ ಹೋಗುವ ಮಾರ್ಗ) ಎರಡು ಭಾಗದಲ್ಲಿ ಬಿಟಿ ಕಾಮಗಾರಿ ಸೇರಿದಂತೆ ಎಲ್ಲ ಕಾಮಗಾರಿಯನ್ನು ಪೂರ್ಣಗೊಳಿಸಿ ನವೆಂಬರ್ ಅಂತ್ಯದೊಳಗೆ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಯಾವುದೇ ನೆಪವೊಡ್ಡದೆ ಕಾಮಗಾರಿ ಪೂರ್ಣಗೊಳಿಸವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಳೆದ ಕೆಲವು ದಿನಗಳ ಹಿಂದೆ ನಿರಂತರವಾಗಿ ಮಳೆ ಬಂದ ಕಾರಣ ವೆಲ್ಡಿಂಗ್ ಹಾಗೂ ಇತರೆ ಕಾಮಗಾರಿಯಲ್ಲಿ ಅಡಚಣೆ ಉಂಟಾಗಿ ಒಂದು ತಿಂಗಳು ಕಾಮಗಾರಿ ವಿಳಂಬವಾಗಿದ್ದು, ನವೆಂಬರ್ ಅಂತ್ಯದೊಳದಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ರೇಲ್ವೆಯ ಉಪ ಮುಖ್ಯ ಅಭಿಯಂತರಾದ ಸಿ.ಪಿ.ರೆಡ್ಡಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೋಮನಾಥ್, ಗುತ್ತಿಗೆದಾರರು ವೆಂಕಟರೆಡ್ಡಿ ಉಪಸ್ಥಿತರಿದ್ದರು.